14 March 2009

ಕೃಷಿಕ ಬಡವನಾಗೇ ಇರಬೇಕೇ ?

"ಹಳ್ಳಿಗಳಲ್ಲಿ ಕೂಲಿ ಕೆಲಸದವರ ಕೊರತೆ ಇದೆ, ಈಗಿನ ಜನಾಂಗದ ಹಳ್ಳಿಯ ಜನ ನಗರಕ್ಕೆ ಹೋಗಿ ಕೆಲಸಕ್ಕೆ ಸೇರ್ಕೋತಾರೆ, ಹಳ್ಳಿಗಳಲ್ಲಿ ಕೃಷಿ ಮಾಡೋರು ಯಾರೂ ಇಲ್ಲ, ತೋಟಗಳು ಒಣಗಿ ಹೋಗಿವೆ, ಗದ್ದೆಗಳು ಖಾಲಿ ಬಿದ್ದಿವೆ, ಅಲ್ಲಿರುವ ಹೆತ್ತವರಿಗೆ ಒಂಟಿತನ ಕಾಡುತ್ತಿದೆ" ..... ಹೀಗೆಲ್ಲಾ ನಾವು ಕೇಳುತ್ತೇವೆ, ಪತ್ರಿಕೆಗಳಲ್ಲಿ ಓದುತ್ತೇವೆ.

ಕಾರಣ:
ಹಳ್ಳಿಯಲ್ಲಿ ಜಮೀನು ಇದ್ರೂನೂ ಕೂಲಿ ಕೆಲಸದವರು ಸಿಗಲ್ಲ. ಬರೇ ಮನೆಯವರೇ ಸೇರಿ ಭತ್ತದ ವ್ಯವಸಾಯ ಮಾಡೋಕೆ ಸಾಧ್ಯವೇ ಇಲ್ಲ. ಬೆಳೆ ಬೆಳೆದ್ರೂನೂ ಹೊಟ್ಟೆ ತುಂಬಿಸ್ಕೋಬಹುದು. ಏನೂ ಉಳಿಯಲ್ಲ. ಹೀಗಿರೋವಾಗ ಕೃಷಿಗೆ ಬೇಕಾದ ಆಧುನಿಕ ಪರಿಕರಗಳನ್ನು ಕೊಳ್ಳೋದು ಹೇಗೆ ? ಪೇಟೆಯವರ ಹಾಗೆ ಮನೆ, ಸೌಕರ್ಯಗಳನ್ನು ಮಾಡ್ಕೊಳ್ಳೋದು ಹೇಗೆ ? ಅಕ್ಕಿ ಬೆಲೆ ಕೆ. ಜಿ. ಗೆ ೩೫ ರೂ. ಆಗಿದೆ. ಆದ್ರೆ ಅದರಲ್ಲಿ ಎಷ್ಟು ಭಾಗ ಬೆಳೆದ ರೈತನಿಗೆ ಸಿಗುತ್ತೆ ?

ಹಳ್ಳಿಗರು/ಕೃಷಿಕರು ಸಿನಿಮಾದಲ್ಲಿ ಅಥವಾ ಕಾರ್ಯ ನಿಮಿತ್ತ ನಗರಕ್ಕೆ ಹೋದಾಗ ನಗರವಾಸಿಗಳನ್ನೂ, ನಗರದ ವ್ಯವಸ್ಥೆಗಳನ್ನೂ, ಸೌಕರ್ಯಗಳನ್ನೂ ನೋಡುತ್ತಾರೆ. ನಗರದ ಜನರು ಕೋಟು-ಬೂಟು ಹಾಕಿ ಕಾರಲ್ಲಿ ಕೂತು ಕಚೇರಿಗೆ ಹೋಗೋದನ್ನು ನೋಡಿ ಆಕರ್ಷಿತರಾಗುತ್ತಾರೆ. ಅಥವಾ ತಮ್ಮ ಊರಿನ ಕೆಲವರು ಓದಿ, ನಗರಕ್ಕೆ/ವಿದೇಶಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಂಡಿರುವವರನ್ನೂ ನೋಡುತ್ತಾರೆ. "ನಮ್ಮಿಂದ ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳನ್ನು ಚೆನ್ನಾಗಿ ಓದಿಸ್ತೀವಿ. ನಮ್ಮ ಮಕ್ಕಳೂ ಅವರ ಥರ ನಗರಕ್ಕೆ ಹೋಗಿ ದೊಡ್ಡ ಆಫೀಸರ್ ಆಗ್ಬೇಕು. ನಮ್ಮ ಥರ ಬಿಸಿಲಲ್ಲಿ ಗದ್ದೆಯಲ್ಲಿ/ತೋಟದಲ್ಲಿ ಕೆಲಸ ಮಾಡೋದು ಬೇಡ." ಅಂತ ಆಸೆ ಪಟ್ಕೋತಾರೆ. ಹಾಗೇ ಮಕ್ಕಳೂ ಓದಿದ ನಂತರ ನಗರಕ್ಕೆ ಹೋಗಿ ಕೆಲಸಕ್ಕೆ ಸೇರ್ಕೋತಾರೆ. ಆಮೇಲೆ ಮಕ್ಕಳಿಗೂ ತಮ್ಮ ಹೆತ್ತವರು ತಮ್ಮ ಜೊತೆ ಇರಬೇಕು, ಹಳ್ಳಿಯಲ್ಲಿ ಅವರನ್ನು ನೋಡ್ಕೊಳ್ಳೋರು ಇಲ್ಲ, ಅವರು ಬಿಸಿಲಲ್ಲಿ ಕಷ್ಟ ಪಡೋದು ಬೇಡ ಅಂತ ಅನ್ನಿಸುತ್ತೆ. ಅಲ್ಲಿನ ಜಮೀನು ಮಾರಿ ಅವರನ್ನು ನಗರಕ್ಕೆ ಕರೆಸಿಕೊಳ್ತಾರೆ.

ನನ್ನ ಅನಿಸಿಕೆ ಪ್ರಕಾರ ಇದು ತಪ್ಪಲ್ಲ. ಆಸೆ ಎಲ್ಲರಿಗೂ ಇರುತ್ತೆ. ಕನಸು ಎಲ್ಲರೂ ಕಾಣುತ್ತಾರೆ. ಹಣ, ಆಸ್ತಿ, ಅಂತಸ್ತು, ಮನೆ, ಕಾರು ಎಲ್ಲರಿಗೂ ಬೇಕು. ನಗರವಾಸಿಗಳು/ಶ್ರೀಮಂತರು ನಗರದಲ್ಲೇ ಇರಬೇಕು, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು, ಅವರ ವಂಶಸ್ಥರೆಲ್ಲಾ ನಗರದಲ್ಲೇ ಆಫೀಸ್ ಕೆಲಸಕ್ಕೇ ಹೋಗಬೇಕು, ಕಾರಲ್ಲಿ ಕೂತು ಭುರ್ರ್ ಅಂತ ಓಡಾಡಬೇಕು, ಆದರೆ ಕೃಷಿಕರು ಹಳ್ಳಿಯಲ್ಲೇ ಇರಬೇಕು, ಬಡವರಾಗೇ ಇರಬೇಕು, ಬಿಸಿಲಲ್ಲಿ ಬೆವರು ಸುರಿಸಿ ಕೆಲಸ ಮಾಡಬೇಕು ಮತ್ತು ನಗರವಾಸಿಗಳ ಹೊಟ್ಟೆ ತುಂಬಿಸಬೇಕು. ಶ್ರೀಮಂತರು ಇನ್ನೂ ಶ್ರೀಮಂತರಾಗಬೇಕು, ಕೃಷಿಕ ಮಾತ್ರ ಬಡವನಾಗೇ ಇರಬೇಕು. ಇದು ಒಪ್ಪ ತಕ್ಕ ಸಿದ್ಧಾಂತವೇ ? "ರೈತ ದೇಶದ ಬೆನ್ನೆಲುಬು" ಅಂತಾರೆ. ಆದ್ರೆ ಅವನು ಯಾವಾಗ್ಲೂ ಬೆನ್ನೆಲುಬಾಗಿದ್ದು ಕಷ್ಟ ಅನುಭವಿಸ್ತಾ ಇರಬೇಕೇ ? ಕಣ್ಣು, ಕಿವಿ, ಮೂಗು, ನಾಲಗೆಯಾಗಿ ಸುಖ ಪಡೋದು ಬೇಡವೆ ?

ಪರಿಹಾರ ?
ಸರಕಾರ ಒಂದು ಕಾನೂನು ಮಾಡಿ, "ನಗರದವರು ಎಲ್ಲರೂ ಆವರ್ತನೆಯಲ್ಲಿ(Rotation Basis) ಹಳ್ಳಿಗೆ ಹೋಗಿ ಇಂತಿಷ್ಟು ವರ್ಷ ವ್ಯವಸಾಯ ಮಾಡಬೇಕು" ಅಂದ್ರೆ ಹೇಗೆ ? ಇಂತಹ ಕಾನೂನು ಮಾಡಿದ್ರೂ ಅದನ್ನು ಜಾರಿಗೆ ತರೋದು ಕಷ್ಟ, ನಗರದವರು ಒಪ್ಪಲ್ಲ.

ಅಥವಾ ನಗರದವರು ಸ್ವಇಚ್ಛೆಯಿಂದ ಹಳ್ಳಿಗಳಿಗೆ ಹೋಗಿ ಜಮೀನು ತಗೊಂಡು ವ್ಯವಸಾಯ ಮಾಡಬೇಕು. ಕೆಲವರು ಜಮೀನು ತಗೋತಾರೆ, ಆದ್ರೆ ತಾವಾಗಿ ಅಲ್ಲಿ ಹೊಲದಲ್ಲಿ ಕೆಲಸ ಮಾಡಲ್ಲ. ಕೆಲಸಕ್ಕೆ ಕೂಲಿಗಳನ್ನು ಇಟ್ಕೋತಾರೆ. ತಾವೇ ಕೆಲಸ ಮಾಡಿದ್ರೆ ಕೃಷಿಕನ ಕಷ್ಟ ಏನು ಅಂತ ಗೊತ್ತಾಗುತ್ತೆ.

ಇಲ್ಲಾ ಕೆ.ಜಿ. ಅಕ್ಕಿಗೆ ೩೦೦ ರೂ., ಬೇಳೆಗೆ ೫೦೦ ರೂ., ಟೊಮೆಟೋಗೆ ೧೦೦ ರೂ. ಆಗಲಿ. ಆವಾಗ ಎಲ್ಲರೂ ಹಳ್ಳಿ ಕಡೆ ಮುಖ ಮಾಡ್ತಾರೆ. ಕೋರಮಂಗಲ/ಇಂದಿರಾನಗರದ ಸೈಟ್ ಬೆಲೆ ಹಳ್ಳಿಯ ಜಮೀನಿಗೆ ಬರುತ್ತೆ. ಹಳ್ಳಿಗಳಲ್ಲಿ ಬೆಳೆ ಬೆಳೆಸೋಕೆ, ಮಾರೋಕೆ ಹೊಸ ಕಂಪೆನಿಗಳು ಉದಯಿಸಬಹುದು, ಇಳುವರಿ ಹೆಚ್ಚಿಸಲು ಸಂಶೋಧನೆಗಳಾಗಬಹುದು, ಹೊಸ ಹೊಸ ಪೇಟೆಂಟ್ ಗಳು ಆಗಬಹುದು. ಹೊಸ ಹೊಸ ಯಂತ್ರೋಪಕರಣಗಳು ಬರಬಹುದು. ಕ್ರೆಡಿಟ್ ಕಾರ್ಡ್ ಏಜಂಟ್ ಗಳು ರೈತರ ಬಾಲ ಹಿಡಿಯಬಹುದು. ಒಟ್ಟಿನಲ್ಲಿ ಕ್ರಾಂತಿಯಾಗಬಹುದು.

ಏನಂತೀರಿ ?

ನಿಮ್ಮಲ್ಲಿ ಇನ್ನು ಏನಾದರೂ ಪರಿಹಾರ ಇದೆಯಾ ? ಬರೆದು ಕಳುಹಿಸಿ.


3 comments:

  1. ಕೆ.ಜಿ. ಅಕ್ಕಿಗೆ ೩೦೦ ರೂ., ಬೇಳೆಗೆ ೫೦೦ ರೂ., ಟೊಮೆಟೋಗೆ ೧೦೦ ರೂ. ಮಾಡೋದು ಸುಲಭ.. ಆದರೆ ಅದರ ಪ್ರಯೋಜನ ಮಧ್ಯವರ್ತಿಗಳ ಕಿಸೆಗೆ ಹೋಗದೆ ರೈತನ ಜೇಬು ಸೇರುವ೦ತೆ ಮಾಡೋದು ಮುಖ್ಯ..

    ರೈತರಿಗೆ ತಮ್ಮ ಬೆಳೆಯನ್ನು ಧೀರ್ಘ ಕಾಲದ ವರೆಗೆ ಸ೦ರಕ್ಷಿಸಿಟ್ಟು ಯೋಗ್ಯ ಬೆಲೆ ಬ೦ದಾಗ ಮಾತ್ರ ಮಾರುವ ಸೌಲಭ್ಯ ಸಿಗಬೇಕಿದೆ

    ReplyDelete
  2. ಕೆ.ಜಿ. ಅಕ್ಕಿಯ ೩೦೦ ರೂಪಾಯಿಯಲ್ಲಿ, ಕನಿಷ್ಟ ೨೫೦ ರೂಪಾಯಿ ರೈತನಿಗೆ ಸಿಗಬೇಕು. ಹಾಗಾದಾಗ ಬೆಳೆಯನ್ನು ದೀರ್ಘ ಕಾಲದ ವರೆಗೆ ಸ೦ರಕ್ಷಿಸಿಡುವ ತಂತ್ರಜ್ಞಾನ ಬರುತ್ತೆ.

    ReplyDelete
  3. ಕೆಲವು ತಿಂಗಳ ಹಿಂದೆ ಟೊಮೆಟೋಗೆ ೪೦ ರೂ. ಆಗಿತ್ತು. ಆವಾಗ ಎಲ್ಲರೂ ಟೊಮೆಟೋ ಬೆಳೆಸಿದರು. ನಿನ್ನೆ ಕೊಳೆತು ಹೋಗುತ್ತಿರುವ ಟೊಮೆಟೋ ರಾಶಿಯನ್ನು ಒಂದು ವಾರ್ತಾ ವಾಹಿನಿಯಲ್ಲಿ ನೋಡಿದೆ. ಒಂದು ಟ್ರಕ್ ಅದರ ಮೇಲೆಯೇ ಹರಿದು ಹೋಯಿತು. ಹೀಗಾದರೆ ರೈತರಿಗೆ ತುಂಬಾ ನಷ್ಟ. ಅದನ್ನು ಸಂರಕ್ಷಿಸಿ ಇಡೋದು ಅಥವಾ ರಫ್ತು ಮಾಡೋದು ಅಥವಾ ಅಗತ್ಯಕ್ಕೆ ತಕ್ಕಷ್ಟು ಬೆಳೆಯೋಕೆ ರೈತರಿಗೆ ಸಲಹೆ ಕೊಡುವವರೂ ಬೇಕು.

    ReplyDelete