28 February 2009

ಭಾರತದ ಐಟಿಯಲ್ಲಿ R&D ಯಾಕಿಲ್ಲ ?

ಪ್ರತಾಪ್ ಸಿಂಹ ಅವರ ಇವತ್ತಿನ(28-02-2009) ಲೇಖನ ಓದಿದೆ. ಕಳೆದ ವಾರ ಐಟಿ ಉದ್ಯೋಗಿಗಳನ್ನು ಚುಚ್ಚಿ ಮಾತಾಡಿದ್ರು. "ಕುರುಡು ಕಾಂಚಾಣ ಕುಣಿತಿತ್ತು, ಐಟಿಯವರಿಗೆ ದುಡ್ಡಿನ ಅಹಂಕಾರ ಇತ್ತು, ಮೆರಿತಾ ಇದ್ರು, ಯಾರೂ ಹಿಡಿಯೋರೇ ಇರ್ಲಿಲ್ಲ, ಇವತ್ತು ಯಾರೂ ಇವರ ಬಗ್ಗೆ ಕನಿಕರ ತೋರಿಸಲ್ಲ, ಸ್ವಾಮಿನಿಷ್ಠೆ ಇಲ್ಲ, ವರ್ಕ್ ಕಲ್ಚರ್ ಇಲ್ಲ, ಜನರು ಈಗ REJOICE ಮಾಡ್ತಿದ್ದಾರೆ" ಅಂತ. ಆದರೆ ಇವತ್ತು ಐಟಿ ದೊರೆಗಳ ಬಗ್ಗೆ ಬರೆದಿದ್ದಾರೆ. ಚರ್ಚೆಯಾಗಬೇಕಾದ ವಿಷಯವನ್ನೇ ಎತ್ತಿದ್ದಾರೆ. ಕಳೆದ ಸಲಕ್ಕಿಂತ ಸ್ವಲ್ಪ ಪ್ರಬುದ್ಧವಾಗಿ ಬರೆದಿದ್ದಾರೆ. ಯೋಚನೆ ಮಾಡುವ, ಪ್ರೇರಣೆ ನೀಡುವ ಮಾತಾಡಿದ್ದಾರೆ.

"ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಒಬ್ಬನೂ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ ? ನಮ್ಮ ಸಾಫ್ಟ್ ವೇರ್ ಕ್ಷೇತ್ರ Servicingನಿಂದ Reaserch ಹಾಗೂ Product Developmentಗೆ ಯಾಕೆ ಗ್ರ್ಯಾಜುಯೇಟ್ ಆಗಿಲ್ಲ ?".
ಹೌದು. ಈ ವಿಚಾರ ನನ್ನ ಮನಸ್ಸಿಗೂ ಬಂದಿತ್ತು. 6-7 ವರ್ಷಗಳ ಹಿಂದೆ. ಇಷ್ಟೆಲ್ಲಾ ಐಟಿ ಕಂಪೆನಿಗಳು ಬೆಂಗಳೂರಲ್ಲಿ ಇವೆ. ಬರೇ IT Service ಮಾಡ್ತವೆ. Windows, MAC, Google, Yahoo, Adobe ನಂತೆ ತಮ್ಮದೇ ಆದ ಯಾವ Product ಇದೆ ? ಇವರು ಯಾಕೆ ಅದಕ್ಕೆ ಒತ್ತು ಕೊಡಲ್ಲ ? ಅಂತ. ಈಗ ಗೊತ್ತಾಗ್ತಾ ಇದೆ ಕೆಲವೊಂದು ಕಾರಣಗಳಿಂದಾಗಿ ಅದು ಕಷ್ಟ ಅಂತ. ಆದರೆ ಅಸಾಧ್ಯ ಅಲ್ಲ.

ಐಟಿ ಬಂದು 15 ವರ್ಷ ಆಯ್ತು. ಇಷ್ಟು ದೊಡ್ಡದಾಗಿ ಬೆಳೆದ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಸತ್ಯಂ ಕಂಪನಿಗಳು ಇನ್ನೂ ಯಾಕೆ Product Development ಶುರು ಮಾಡಿಲ್ಲ ? ನನ್ನ ಅನಿಸಿಕೆ ಹೀಗಿದೆ... ಅಮೆರಿಕಾದ A ಕಂಪನಿ, ಭಾರತದ B, C & D ಕಂಪನಿಗಳಿಂದ ಬೇರೆ ಬೇರೆ ಸಾಫ್ಟ್ ವೇರ್ ಗಳನ್ನು ಬರೆಸುತ್ತದೆ. A ಕಂಪನಿ ಅವೆಲ್ಲವನ್ನೂ ಒಟ್ಟು ಮಾಡಿ X ಅನ್ನುವ ಒಂದು final product ತಯಾರು ಮಾಡುತ್ತದೆ. ಆ ಕೆಲಸವೂ ಭಾರತದಲ್ಲೇ ಆಗಬಹುದು. ಆಮೇಲೆ ಉತ್ಪನ್ನವನ್ನು ಭಾರತದಲ್ಲೇ ಮಾರಬಹುದು. ಈಗ ಭಾರತದ B ಕಂಪನಿಗೆ X ಅನ್ನುವ final productನ್ನು ತಾನೇ ಯಾಕೆ ತಯಾರು ಮಾಡಿ ದುಡ್ಡು ಮಾಡಬಾರದು ಅಂತ ಯೋಚನೆ ಬರುತ್ತೆ. ಅದಕ್ಕೆ ಬೇಕಾದ ಪ್ರತಿಭಾವಂತ ಇಂಜಿನೀಯರ್ ಗಳು ಇದ್ದಾರೆ. ಆದರೆ ಆ ಕೆಲಸಕ್ಕೆ ಕೈ ಹಾಕಿದ ಕೂಡಲೆ ಅಮೆರಿಕಾದ A ಕಂಪನಿ, ಭಾರತದ B ಕಂಪನಿಗೆ ಕೆಲಸ/ದುಡ್ಡು ಕೊಡೋದು ನಿಲ್ಲಿಸುತ್ತೆ. ಯಾಕಂದ್ರೆ ಈಗ Bಯು Aಗೆ ಪ್ರತಿಸ್ಪರ್ಧಿ. ಆವಾಗ B ಕಂಪನಿಯ 50,000 ಮಂದಿ ಕೆಲಸ ಕಳೆದುಕೊಳ್ತಾರೆ. ಸಂಬಳ ಕೊಡಲು Bಕಂಪನಿ ಬಳಿ ದುಡ್ಡು ಇರಲ್ಲ. X ಅನ್ನುವ ಒಂದು final product ತಯಾರು ಮಾಡಲು ವರ್ಷಗಳೇ ಬೇಕು. ಇವತ್ತು ಹಣ ಹಾಕಿ, ಕೆಲಸ ಶುರು ಮಾಡಿದ್ರೆ, ನಾಳೆನೇ ದುಡ್ಡು ಬರೋಕೆ ಶುರು ಆಗಲ್ಲ. ಅದಕ್ಕೆ ದುಡ್ಡು ಎಲ್ಲಿಂದ ತರೋದು ? ಭಾರತ ಅಮೆರಿಕಾದಂತೆ ಶ್ರೀಮಂತ ದೇಶವಲ್ಲ. ಹೋಗ್ಲಿ ಬೇರೆ ಕೆಲಸಗಳ ಬಿಡುವಿನ ವೇಳೆಯಲ್ಲಿ ಇದನ್ನಾ ಮಾಡೋಣ ಅಂದ್ರೆ, ಕೆಲಸ ಮುಗಿಸೋಕೆ ಇನ್ನೂ ಹೆಚ್ಚಿನ ವರ್ಷಗಳು ಬೇಕು. ಬಿಡುಗಡೆಯಾಗುವ ಹೊತ್ತಿಗೆ ಅದು old model ಆಗಿ ಬಿಡುತ್ತೆ. ಕೊಳ್ಳೋರೇ ಇಲ್ಲ.

ವಿದ್ಯಾಕ್ಷೇತ್ರದಲ್ಲಿ ಸೇವಾ(Service) ಮನೋಭಾವ ಇರಬೇಕು. ಆದರೆ ಭಾರತದ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳು ಸೇವೆ ಬಿಟ್ಟು ವ್ಯಾಪಾರ ಮಾಡುತ್ತವೆ. ಕೆಲವು ಉಪನ್ಯಾಸಕರು ದುಡ್ಡಿನ ಆಸೆಗೆ ಐಟಿ ಕಡೆಗೆ ಹೋಗ್ತಾರೆ. ಬುದ್ಧಿವಂತ, ಪ್ರತಿಭಾನ್ವಿತ ಇಂಜಿನಿಯರ್ ಗಳು ಉಪನ್ಯಾಸಕರಾಗಿ ಇನ್ನಷ್ಟು ಚಾಣಾಕ್ಷ ಇಂಜಿನಿಯರ್ ಗಳನ್ನು ರೂಪುಗೊಳಿಸಬೇಕು. ಉಪನ್ಯಾಸಕ ವೃತ್ತಿಯಲ್ಲಿ ಆಸಕ್ತಿ ಇರೋರಿಗೆ ಕಾಲೇಜುಗಳು AICTE ನಿಗದಿ ಮಾಡಿದ ಸಂಬಳನೂ ಕೊಡದೆ, ಮಾಡಿದ ಒಳ್ಳೆಯ ಕೆಲಸಕ್ಕೆ ಗೌರವನೂ ಕೊಡದೆ ಕೆಟ್ಟದಾಗಿ ನಡೆಸಿಕೊಳ್ತವೆ. ಅದಕ್ಕೆ ಅವರೂ ಕೂಡ ಐಟಿಕಡೆ ಮುಖ ಮಾಡ್ತಾರೆ. ಕೆಲವು ಒಳ್ಳೆಯ ಪ್ರಾಧ್ಯಾಪಕರಿದ್ದಾರೆ. ಆದರೆ ಎಷ್ಟು ಜನ ? ಅವರಿಂದ ಏನು ಬದಲಾವಣೆ ಮಾಡಲು ಸಾಧ್ಯ ? ಇದರಿಂದ ವಿದ್ಯಾರ್ಥಿಗಳು ಪುಸ್ತಕದ ಬದನೇಕಾಯಿ ಮಾತ್ರ ಕಲಿತಾರೆ. ಪರೀಕ್ಷೆಗೆ ಎಷ್ಟು ಬೇಕೋ ಅಷ್ಟೇ. Campus Selectionಗೆ ಎಷ್ಟು ಬೇಕೋ ಅಷ್ಟೇ. ಹೊಸದರ ಬಗ್ಗೆ ಚಿಂತೆ ಮಾಡೋಕೆ ಹೋಗಲ್ಲ. "ಹೀಗೆ" ಮಾಡಬೇಕು ಅಂದ್ರೆ, "ಹೀಗೆ"ನೇ ಮಾಡ್ತಾರೆ. "ಹಾಗೆ" ಮಾಡಿದ್ರೆ ಏನಾಗುತ್ತೆ ? ಬೇರೆ ಥರ ಮಾಡೋಕೆ ಆಗೊಲ್ವೆ ? ಅಂತ ಯೋಚನೇನೆ ಮಾಡೋಲ್ಲ. ನರ್ಸರಿಯಿಂದ ಇಂಜಿನೀಯರಿಂಗ್ ವರೆಗೂ ಟ್ಯೂಷನ್. ಚಮಚದಿಂದ ತಿಂದೇ ಅಭ್ಯಾಸ. ತಾವೇ ಸ್ವಂತ ಕೈಯಿಂದ ತಿನ್ನೋಕೆ ಕಲಿಯೋದೇ ಇಲ್ಲ. 20 ವರ್ಷ ಆದಮೇಲೆ, ಇಂಜಿನೀಯರಿಂಗ್ ನಲ್ಲಿ ಸ್ವಂಯ ಓದಿ ಕಲಿಯುವ ಪ್ರೌಢಿಮೆ/ಜಾಣ್ಮೆ ಇಲ್ವೇ ? ಇನ್ನು ಇಂಥಾ ಕಾಲೇಜ್ ಗಳಿಂದ ಹೊರಬಂದ ವಿದ್ಯಾರ್ಥಿಗಳು ಹೊಸ ಕಂಪೆನಿ ಶುರು ಮಾಡಿ, ಹೊಸ Product ಮಾಡಿ ಮಾರೋದು ಹೇಗೆ ?

ಅಮೆರಿಕಾ ಹಾಗೂ ಯೂರೋಪ್ ನ ವಿಶ್ವವಿದ್ಯಾನಿಲಯಗಳು ತುಂಬಾ ಶ್ರೀಮಂತವಾಗಿವೆ. ಅಲ್ಲಿ ಓದುತ್ತಿರುವ ಅಲ್ಲಿನ ಅಥವಾ ಭಾರತದ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಹಚ್ಚುತ್ತಾರೆ. ಒಳ್ಳೆಯ ವಿದ್ಯಾರ್ಥಿವೇತನ ಸಿಗೋದ್ರಿಂದ ಅವರಿಗೆ ಸಂಶೋಧನೆ ಬಿಟ್ಟು ಬೇರೆ ತಲೆಬಿಸಿ ಇರಲ್ಲ. ಅಲ್ಲೇ ಹೊಸ Productಗಳು ಮೊಳಕೆಯೊಡೆಯುವುದು. ಅಲ್ಲಿಂದ ಹೊರಬಂದ ನಂತರ ಅದೇ ಜನ ಸೇರಿ ಹೊಸ ಕಂಪನಿ ಮಾಡಿ ಬೆಳೆಯೋದು. Finlandನ Linus Benedict Torvalds ಅನ್ನೋನು Linux ಬರೆದಿದ್ದು University if Helsinki ಯಲ್ಲಿ. ಹೀಗೆ ಇನ್ನೂ ಅನೇಕ Productಗಳಿಗೆ ಅಡಿಪಾಯ ಹಾಕಿದ್ದು ವಿಶ್ವವಿದ್ಯಾನಿಲಯಗಳ ಪ್ರಯೋಗ ಶಾಲೆಗಳಲ್ಲೇ. ಅವೇ ಇಂದು ಹೆಮ್ಮರವಾಗಿ ಬೆಳೆದಿವೆ. ನೀವೇ ಹೇಳಿ ಭಾರತದಲ್ಲಿ ಅಂತಹ ಎಷ್ಟು ವಿಶ್ವವಿದ್ಯಾನಿಲಯಗಳು ಇವೆ ? (IIT/IIScಗಳಲ್ಲಿ ಸಂಶೋಧನೆ ಆಗುತ್ತೆ ನಿಜ). ಭಾರತದ ಎಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗೆ ದುಡ್ಡು ಇದೆ ? ಹೊಸ Instruments ಕೊಳ್ಳಲು ದುಡ್ಡು ಇದೆ ? ಹಳೇ ಕಾಲದ Instrumentಗಳಿಂದ ಏನು ಸಂಶೋಧನೆ ಮಾಡಲು ಸಾಧ್ಯ ? (ಭಯೋತ್ಪಾದಕರ ಬಳಿ AK47 ಇರೋವಾಗ, ನಮ್ಮ ಪೋಲೀಸರ ಬಳಿ ಲಾಠಿ, ಸಣ್ಣ ರಿವಾಲ್ವರ್ ಇರೋಹಾಗೆ). ಇನ್ನು PhD ಬಗ್ಗೆ ಹೇಳೋದೇ ಬೇಡ. PhDಗೆ ಆಯ್ಕೆ ಮಾಡುವ ವಿಷಯಗಳು, ಮಾರ್ಗದರ್ಶಕರನ್ನು ಆಯ್ಕೆ ಮಾಡೋದು, ಸಂಶೋಧನೆ ಮಾಡೋದು, ಪ್ರಬಂಧ ಬರೆಯೋದು, ಅದರ ಗುಣಮಟ್ಟದ ಬಗ್ಗೆ ವಿಜಯ ಕರ್ನಾಟಕದಲ್ಲಿ ಸಾಕಷ್ಟು ಜನ ಹೇಳಿಕೊಂಡಿದ್ದಾರೆ. ಇನ್ನು ಹೇಳೋಕೆ ಏನೂ ಉಳಿದಿಲ್ಲ.

ಇನ್ನು ಕೆಲ Brilliant Engineerಗಳಿಗೆ ಒಳ್ಳೆಯ ಯೋಚನೆ & ಯೋಜನೆ ಇದೆ, ಸ್ವಂತ ಕಂಪನಿ ತೆರೆದು R&D ಮಾಡಿ ತಮ್ಮದೇ ಆದ Product ಬಿಡುಗಡೆ ಮಾಡುವ ಯೋಚನೆ ಬಂದ್ರೆ ಮನೆಯವರು ಬೇಡ ಅನ್ನುತ್ತಾರೆ. "ಸುಮ್ನೆ ಕೆಲಸಕ್ಕೆ ಸೇರಿ ಆರಾಮವಾಗಿರು" ಅಂತಾರೆ. ಸ್ನೇಹಿತರು "ನಿಂಗೆ ತಲೆ ಕೆಟ್ಟಿದೆ" ಅಂತಾರೆ. ಮೊದಲೇ ಭಾರತ ಬಡ/ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. (ಇದ್ದಿದ್ದ ಎಲ್ಲವನ್ನೂ ಬ್ರಿಟಿಷರು ಅಂದೇ ದೋಚಿಕೊಂಡು ಹೋದ್ರು.) ಹೀಗಿರೋವಾಗ ಹಣ ಹೂಡಲು ಯಾವ Venture Capitalist ಮುಂದೆ ಬರ್ತಾರೆ ? ಕಷ್ಟಪಟ್ಟು ದುಡಿದ White Money ಹೂಡಿ risk ತಗೊಳ್ಳಲು ಯಾರೂ ಮುಂದೆ ಬರಲ್ಲ. ಇನ್ನು ಕೆಲವರದ್ದು Black Money, Swiss Bankನಲ್ಲಿದೆ. ಅದೂ ಬರಲ್ಲ. ಇನ್ನು ಹೇಗೆ R&D ಮಾಡಿ ತಮ್ಮದೇ Product ಮಾಡೋದು ? ಒಂದು ವೇಳೆ ಎಲ್ಲಾ ಸರಿ ಹೋಗಿ Product ಮಾಡಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ರು ಅನ್ನೋಣ. ಆವಾಗ ಅದೇ ಅಮೆರಿಕಾದ ಕಂಪೆನಿಗಳಿಂದ ಸ್ಪರ್ಧೆ. ಈ ಸ್ಪರ್ಧೆ ಯನ್ನು ಸಮರ್ಥವಾಗಿ ಎದುರಿಸಲು ಇನ್ನೂ ದುಡ್ಡು ಬೇಕು. ಈ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಹೊಸ ಕಂಪನಿಯನ್ನು ಮುಚ್ಚುವಂತೆ ಮಾಡುತ್ತೆ. ಇಲ್ಲಾ ಕೊಂಡುಕೊಳ್ಳುತ್ತೆ. ಕೊಂಡ ಮೇಲೆ ಈ ಹೊಸ Product ನ್ನು ಅಲ್ಲಿಗೇ ನಿಲ್ಲಿಸಿ ತಮ್ಮ Product ನ್ನು ಮಾತ್ರ ಮಾರಾಟ ಮಾಡುತ್ತೆ. Hindustan Lever, Proctor & Gamble ಗಳು ಭಾರತದ ಎಷ್ಟು ಸಣ್ಣ ಸಾಬೂನು ಕಂಪನಿಗಳನ್ನು ಮುಚ್ಚಿವೆ ಅಥವಾ ಕೊಂಡಿವೆ ? ಹಾಗೇ Microsoft ಇಷ್ಟು ದೊಡ್ಡದಾಗಿ ಬೆಳೆಯುವಾಗ ಎಷ್ಟು ಸಣ್ಣ ಕಂಪನಿಗಳನ್ನು ಹೊಸಕಿ ಹಾಕಿರಬಹುದು ? ಗೊತ್ತಿಲ್ಲ.

ಹೆಚ್ಚಿನ ಭಾರತೀಯರು ಅಲ್ಪ ತೃಪ್ತರು. ಕೆಲಸ ಇದೆ, ಸಂಬಳ ಬರ್ತಾ ಇದೆ ಸಾಕು ಅನ್ನೋರು. ಮದುವೆ ಹೆಂಡ್ತಿ, ಮಕ್ಕಳು ತಲೆಬಿಸಿ ಆದ ಮೇಲೆ ಯಾರೂ risk ತಗೋಳೋಕೆ ಮುಂದೆ ಬರಲ್ಲ.

ಇಷ್ಟೆಲ್ಲಾ ಇದ್ರೂನೂ ನಮ್ಮ Product ಗಳು ಇಲ್ಲವೇ ಅಂತ ಏನೂ ಅಲ್ಲ. ವಿಪ್ರೋ ಅವರ ಲ್ಯಾಪ್ ಟಾಪ್, ಪ್ರಿಂಟರ್ ಗಳು ಇವೆ. ಆದರೆ ಎಷ್ಟು ಜನ ಕೊಳ್ತಾರೆ ? ಭಾರತದ ಉತ್ಪನ್ನ ಗಳನ್ನು ಕೊಳ್ಳೋಕೆ ಜನ ಹಿಂದೇಟು ಹಾಕ್ತಾರೆ. Hotmail ಭಾರತೀಯರೇ ಮಾಡಿ ಮಾರಿದ್ದು. ಇನ್ನು ಎಷ್ಟು ಸಣ್ಣ ಕಂಪನಿಗಳು ಶುರು ಆಗಿ, ಮುಳುಗಿ ಹೋಗಿರಬಹುದು, ಹಣದ ಅಭಾವದಿಂದ ಆಮೆಗತಿಯಲ್ಲಿ ಸಾಗುತ್ತಿರಬಹುದು, ಗೊತ್ತಿಲ್ಲ.

R&D ಮಾಡಿ, ತಮ್ಮದೇ ಆದ Product ಬಿಡುಗಡೆ ಮಾಡಿ, ಯಶಸ್ಸು ಸಾಧಿಸುವುದು ಭಾರತದ ಮಟ್ಟಿಗೆ ಕಷ್ಟ ಆದ್ರೆ ಅಸಾಧ್ಯವಲ್ಲ. ಆದ್ರೆ ಯಾರು, ಎಷ್ಟು ಜನ/ಕಂಪನಿ ಮುಂದೆ ಬಂದು ಮಾಡ್ತಾರೆ ? ಹೇಗೆ ಮಾಡ್ತಾರೆ ? ಗೊತ್ತಿಲ್ಲ.


( ಇನ್ನೂ ಕೆಲವು ವಿಷಯಗಳು ........
ತಮ್ಮ ದೊಡ್ಡ Product ಇಲ್ಲದೇ ಇದ್ದರೂ ನಾರಾಯಣ ಮೂರ್ತಿಯವರ ಸಾಧನೆ ಏನೂ ಸಣ್ಣದಲ್ಲ. ಇವರು ಹೊಸದಾಗಿ ಕಂಪೆನಿ ಹುಟ್ಟುಹಾಕಿ ಇಷ್ಟು ಎತ್ತರಕ್ಕೆ ಬೆಳೆಸಿದವರು. ಬೇರೆ ಕೆಲವರ ಥರ ಅಪ್ಪನಿಂದ ಬಂದಿದ್ದನ್ನು ಮುಂದುವರಿಸಿ, ಬೆಳೆಸಿದ್ದಲ್ಲ. ಮೂರ್ತಿಯವರನ್ನು ಭಾರತದ ಬಿಲ್ ಗೇಟ್ಸ್ ಅನ್ನೋದಕ್ಕಿಂತ, ಗೇಟ್ಸ್ ಅಮೆರಿಕಾದ ಮೂರ್ತಿ ಅನ್ನಬಹುದಲ್ಲವೇ ?
ISRO, DRDO, CDAC, C-DOTಗಳ ಸಾಧನೆ ಶ್ಲಾಘನೀಯ. ಇಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ಬಗ್ಗೆ ನಂಗೆ ತುಂಬಾ ಗೌರವ ಇದೆ. ಪ್ರತಿಯೊಬ್ಬ ಭಾರತೀಯನೂ ಈ ಕಂಪೆನಿಗಳ ಬಗ್ಗೆ ಹೆಮ್ಮೆ ಪಡಬೇಕು.
Dell ಮಾಡೊದು ಕಂಪ್ಯೂಟರ್ ನ ಬಿಡಿ ಭಾಗಗಳನ್ನು ಜೋಡಿಸಿ ಮಾರುವ ಕೆಲಸ. ಅಲ್ಲಿ ಎಷ್ಟು ಸಂಶೋಧನೆ ನಡೆಯುತ್ತೆ ನಂಗೆ ಗೊತ್ತಿಲ್ಲ.
Appleನ iPod/iPhoneಗಳು ಪ್ರಸಿದ್ಧ. ಆದರೆ ಅದರ Laptop, MAC Operating Systemಗಳು ಅಷ್ಟು ಪ್ರಸಿದ್ಧಿ ಪಡೆದಿಲ್ಲ. ಬೆಂಗಳೂರಲ್ಲಿ ಯಾರ ಕೈಯಲ್ಲೂ ನಾನು Apple Notebook ನೋಡಿಲ್ಲ.
ಆರ್ಥಿಕ ಹಿಂಜರಿತದಿಂದ Services Companyಗಳಿಗೆ ಮಾತ್ರ ಹೊಡೆತ, ತಮ್ಮದೇ Product ಇರುವ ಕಂಪನಿಗಳಿಗೆ ತೊಂದರೆ ಇಲ್ಲ ಅನ್ನೋದು ತಪ್ಪು. ಒಂದು product ಜನಪ್ರಿಯ ಆದ್ರೆ ಕಂಪನಿಯ ಜತೆಗೆ ದೇಶಕ್ಕೂ ಒಳ್ಳೆಯ ಹೆಸರು ಬರುತ್ತೆ. ಆದರೆ ಆರ್ಥಿಕ ಹಿಂಜರಿತದಿಂದ Product ಮಾರಾಟವಾಗದಿದ್ದಾಗ Product Development ನಿಲ್ಲಿಸಬೇಕಾಗುತ್ತದೆ. (ಕಾರ್ ಗಳ ಮಾರಾಟ ಕುಂಠಿತವಾದಾಗ, ಅದರ ಉತ್ಪಾದನೆಯನ್ನು ಕಡಿಮೆ ಮಾಡುವ ಹಾಗೆ.) ಅದರ ಬಿಸಿ ಐಟಿ, ಬ್ಯಾಂಕಿಂಗ್, ವಾಹನೋದ್ಯಮ, ರಿಯಲ್ ಎಸ್ಟೇಟ್ ಎಲ್ಲದಕ್ಕೂ ತಟ್ಟುತ್ತದೆ.
ಗೇಟ್ಸ್, ಜಾಬ್ಸ್, ಡೆಲ್ ಒಂದು ಹಂತದವರೆಗೆ Product Development ಮಾಡಿರಬಹುದು. ನಂತರ ಅವರು ಮಾಡಿದ್ದು Product Management & Marketing.
ಅಮೆರಿಕಾದ ಕಂಪನಿಗಳು ಇಲ್ಲಿಯ ಸಾಫ್ಟ್ ವೇರ್ ಕಂಪನಿಯವರಿಂದ ಕೆಲಸ ಮಾಡಿಸಿ, ಇಲ್ಲೇ ಮಾರಿ, ದುಡ್ಡು ದೋಚುತ್ತಿವೆ. ನಿಜ. ಹಾಗೇನೇ ಬೇರೆ ಬಹುರಾಷ್ಟ್ರೀಯ ಕಂಪನಿಗಳು ಯಾವುದೇ ಪೋಷಕಾಂಶಗಳಿಲ್ಲದ ತಂಪು ಪಾನೀಯ/ಸಾಬೂನು/ಚಿಪ್ಸ್/ನೀರು ಮಾರಿ ದುಡ್ಡು ದೋಚುತ್ತಿವೆ.
R&D ಕೇವಲ ಐಟಿ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಆಗಬೇಕು.)

25 February 2009

ಐಟಿಯವರ ಬಗ್ಗೆ ಇರೋ ತಪ್ಪು ಕಲ್ಪನೆ

ನಾನು ವಿಜಯ ಕರ್ನಾಟಕ ಪತ್ರಿಕೆಯ ಅಂಕಣಕಾರ ಪ್ರತಾಪ್ ಸಿಂಹ ಅವರ ಅಭಿಮಾನಿ. ಬರವಣಿಗೆ ಚೆನ್ನಾಗಿರುತ್ತೆ, ಹರಿತವಾಗಿರುತ್ತೆ. ವಿಕದಲ್ಲಿ ಬಂದ ಹೆಚ್ಚಿನ ಲೇಖನ ಓದಿದ್ದೀನಿ. ಆದ್ರೆ ಕಳೆದ ಶನಿವಾರ(21-02-2009) ಪ್ರಕಟವಾದ ಲೇಖನ ಓದಿ ಬೇಜಾರಾಯ್ತು.

ಈ ಲೇಖನ ಓದಿದ್ರೆ ತಿಳಿಯುತ್ತೆ, ಪ್ರತಾಪ್ ಗೆ ಐಟಿ ಬಗ್ಗೆ ಎಷ್ಟು ತಿಳಿದಿದೆ ಅಂತ. ಐಟಿಯಿಂದಾಗಿ ಎಷ್ಟು ಊಟ ಮಾಡ್ತಾ ಇದ್ದಾರೆ, ಐಟಿ ಬಿದ್ರೆ ಎಷ್ಟು ಜನರ ಕೆಲಸ ಹೋಗುತ್ತೆ ಅಂತ ಗೊತ್ತಿಲ್ಲ. ಕೇವಲ ಕೆಲವರನ್ನು ನೋಡಿ, ಹೇಳುವುದನ್ನು ಕೇಳಿ, generalize ಮಾಡಿ ಬರೆದಿದ್ದಾರೆ ಅನ್ನಿಸುತ್ತೆ. ನಾನೂ ಐಟಿ ಉದ್ಯೋಗಿ. ಸ್ವಲ್ಪ ಜನಾನ ನೋಡಿ ಎಲ್ಲರೂ ಹಾಗೇನೇ ಅನ್ನೋದು ತಪ್ಪು.

ಐಟಿಯಲ್ಲಿ ಎಲ್ಲರಿಗೂ 6 ಜೇಬುಗಳಲ್ಲಿ ದುಡ್ಡು ತುಂಬಿಸಿ ಕಳಿಸಲ್ಲ. ಕೆಲವರು 10 ಸಾವಿರ ರೂ.ಗೂ ಕಡಿಮೆ ದುಡಿಯುವವರು ಇದ್ದಾರೆ.

ಇಂದು ಐಟಿಯಲ್ಲಿ ಒಬ್ಬನಿಗೆ ಒಳ್ಳೆಯ ಸಂಬಳ ಸಿಗುತ್ತಿದೆ ಅಂದ್ರೆ ಅದು ಅವನ ವಿದ್ಯಾರ್ಹತೆ, ಜ್ಞಾನ, ಅನುಭವ, ಚಾಕಚಕ್ಯತೆ ಇವೆಲ್ಲವಕ್ಕೆ ಸಿಗುತ್ತಿರುವ ಫಲ. ಕಸುಬು ಕಲಿಯದಿದ್ರೆ ಒದ್ದು ಓಡಿಸುತ್ತಾರೆ. ಎಸ್ಸೆಸೆಲ್ಸಿಯಲ್ಲಿ ಫೇಲ್ ಆದವನು ನ್ಯಾಯಯುತವಾಗಿ ಅಷ್ಟು ಆದಾಯ ಪಡೆಯಲು ಸಾಧ್ಯವಿಲ್ಲ. ಅವನನ್ನು ಐಟಿ ಕಂಪನಿ ಸೇರಿಸಿಕೊಂಡು ಅಷ್ಟೇ ಸಂಬಳ ಕೊಡಬೇಕು ಅನ್ನೋದು ತಪ್ಪು. (ಎಸ್ಸೆಸೆಲ್ಸಿ ಫೇಲ್ ಆದವನು ದಡ್ಡ ಅಂತ ಅಲ್ಲ. ಅವನ ಪ್ರತಿಭೆ ಬೇರೆ ಇರಬಹುದು. ಆ ಕ್ಷೇತ್ರದಲ್ಲಿ ಮುಂದುವರಿದು ದುಡ್ಡು ಮಾಡಬಹುದು). ಐಟಿಯವರಿಗೆ ಬರುವ/ಇರುವ ದುಡ್ಡು ನ್ಯಾಯದ್ದು. ಆದಾಯ ತೆರಿಗೆ ಕೊಟ್ಟು ಉಳಿದದ್ದು. ಅಂದ್ರೆ White Money. ದಿನಕ್ಕೆ 10-12 ಗಂಟೆ ದುಡಿದು ಸಂಪಾದಿಸಿದ್ದು. ಅವರಿಗೆ ಅದನ್ನು ಹೇಗೆ ಬೇಕೋ ಹಾಗೆ ಖರ್ಚು ಮಾಡುವ ಅಧಿಕಾರ ಇದೆ. ಇದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಡ. ಹಾಗೇ ಉಳಿಸೋದು ಅವರವರ ವಿವೇಚನೆಗೆ ಬಿಟ್ಟಿದ್ದು. ಉಳಿಸಿದ್ರೆ ಅವರ ಕಷ್ಟ ಕಾಲಕ್ಕೆ ಬರುತ್ತೆ. ಐಟಿಯವರಿಗೆ ದುಡ್ಡು ಬರ್ತಾ ಇದೆ ಅಂತ ಮತ್ಸರ ಪಡೋದು ಅಥವಾ ಐಟಿ ಬಿತ್ತು ಅಂತ ಕೇಕೆ ಹಾಕಿ ನಗೋದು ಸರಿಯಲ್ಲ. ಐಟಿ ಬಿದ್ರೆ ಬೇರೆ ಎಲ್ಲಾ ಉದ್ಯಮಗಳಿಗೆ ಪೆಟ್ಟಾಗುತ್ತೆ. (ಅಮೆರಿಕಾದಲ್ಲಿ ಆಗಿರೋದನ್ನಾ ನೋಡಿದ್ರೆ ಗೊತ್ತಾಗುತ್ತೆ). "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ".

ಎಲ್ಲರೂ ಪ್ರತಿವಾರ Innova book ಮಾಡಿ trip ಹೋಗೋದಿಲ್ಲ. ನಾನು ವರ್ಷಕ್ಕೆ 2-3 ಸಲ ಹೋಗ್ತೀನಿ ಅಷ್ಟೆ. ಎಲ್ಲಾ ಐಟಿ ಉದ್ಯೋಗಿಗಳು 10-15 ಸಾವಿರ ಬಾಡಿಗೆ ಕೊಟ್ಟು 3BHK ಮನೆಯಲ್ಲಿ ಇರಲ್ಲ. 4-5 ಸಾವಿರ ಕೊಟ್ಟು ಕುಟುಂಬದವರ ಜತೆ ಸಣ್ಣ ಮನೆಯಲ್ಲೂ ಇರ್ತಾರೆ. ಇನ್ನು ಅವಿವಾಹಿತರು 3-4 ಜನ ಒಟ್ಟಾಗಿ ಇರ್ತಾರೆ, ದುಡ್ಡು ಉಳಿಸಬೇಕು, ಅಪ್ಪ-ಅಮ್ಮಂಗೆ ಕಳಿಸ್ಬೇಕು, ಅವರನ್ನು ನೋಡ್ಬೇಕು ಅಂತ. ಐಟಿಯಲ್ಲಿ ಇರೋರಿಗೆ ಎಲ್ಲರಿಗೂ 30-40 ಲಕ್ಷದ ಮನೆ/ಸೈಟ್ ತಗೋಳೋಕೆ ಆಗಲ್ಲ. ಕೆಲವರು ಆ ಕನಸನ್ನು ಬಿಟ್ಟಿದ್ದಾರೆ, ಮುಂದೂಡಿದ್ದಾರೆ ಅಥವಾ ತಮ್ಮ ಹಳ್ಳಿಯಲ್ಲಿ ಮನೆ/ಜಮೀನು ತಗೋತಾರೆ. ಎಲ್ಲರೂ ರೀಬಾಕ್ ಶೂ ಹಾಕಲ್ಲ, 200-300 ರೂ. ಚಪ್ಪಲಿ ಹಾಕ್ಕೊಂಡು ಆಫೀಸ್ ಗೆ ಹೋಗೋರು ತುಂಬಾ ಐಟಿ ಜನ ಇದ್ದಾರೆ.

ಇನ್ನು ಹಳ್ಳಿಯಲ್ಲಿ ಕಷ್ಟಪಟ್ಟು ಓದಿ ಐಟಿ ಸೇರಿದವರು ದುಂದುವೆಚ್ಚ ಮಾಡಲ್ಲ. ನಾನು ನೋಡಿದ ಹಾಗೆ ಇಲ್ಲಿನ ಸ್ಥಳೀಯ ಹಾಗೂ ಕರ್ನಾಟಕದ ಜನ ದುಂದು ವೆಚ್ಚ ಮಾಡೋದು ಬಹಳ ಕಡಿಮೆ. ಹೊರಗಿನಿಂದ ಬಂದು ಇಲ್ಲಿ ನೆಲಸಿದವರು, ಅಪ್ಪ-ಅಮ್ಮನಿಂದ ದೂರ ಇರೋರು, ಮೂಗು ದಾರ ಇಲ್ಲದಿರೋರು ಖರ್ಚು ಮಾಡ್ತಾರೆ. ತಿಂಗಳ ಕೊನೆಯಲ್ಲಿ ಅವರಲ್ಲಿ ದುಡ್ಡು ಇರೋಲ್ಲ.

ವಿದ್ಯಾಭ್ಯಾಸ ಮಾಡುತ್ತಿರುವಾಗ ಕೆಲವರ ಕೈಯಲ್ಲಿ ಸಾಕಷ್ಟು ದುಡ್ಡು ಇರೋದಿಲ್ಲ. ಬೇರೆ ದುಡ್ಡು ಇರೋರು ಖರ್ಚು ಮಾಡೋದು ನೋಡಿ ತಮಗೂ ಹಾಗೇ ಮಾಡ್ಬೇಕು ಅನ್ನಿಸುತ್ತೆ. ಆದ್ರೆ ಏನು ಮಾಡೋದು ? ಜೇಬು ಖಾಲಿ. ಆವಾಗ ಅವರು ಅಂದು ಕೊಳ್ತಾರೆ "ಓದು ಮುಗಿದ ಮೇಲೆ ಕೆಲಸಕ್ಕೆ ಸೇರ್ತೀನಿ, ಸಂಬಳ ಬರುತ್ತೆ, ನನಗೆ ಏನು ಬೇಕೋ ಕೊಳ್ಳುತ್ತೇನೆ" ಅಂತ. ಕೆಲಸ ಸಿಕ್ಕಿದ ಮೇಲೆ ಕನಸು ಕಂಡಿದ್ದನ್ನು ಕೊಳ್ಳುತ್ತಾನೆ, ಖರ್ಚು ಮಾಡುತ್ತಾನೆ. 3-4 ತಿಂಗಳುಗಳಾದ ಮೇಲೆ ಉಳಿತಾಯ ಮಾಡಬೇಕು ಅನ್ನೋದು ಗೊತ್ತಾಗುತ್ತೆ. ಮನೆ, ಮನೆಯವರು, ಮದುವೆ, ಮಕ್ಕಳು... ಹೀಗೆ ಜವಾಬ್ದಾರಿ ಬಂದ ಮೇಲೆ ಖಂಡಿತ ದುಂದು ವೆಚ್ಚ ಮಾಡಲ್ಲ. ಒಂದು ವೇಳೆ ಉಳಿತಾಯ ಮಾಡದಿದ್ರೆ ಮುಂದೆ ಅವನಿಗೇ ಕಷ್ಟ. ಇದು ಬರೇ ಐಟಿಯವರಿಗೆ ಮಾತ್ರ ಅಲ್ಲ, ಎಲ್ಲರಿಗೂ ಅನ್ವಯಿಸುತ್ತೆ.

ಪ್ರತಾಪ್ ಅವರು ಐಟಿಯವರು ಖರ್ಚು ಮಾಡೋದರ ಬಗ್ಗೆ ಬರಿತಾರೆ. non-IT ಶ್ರೀಮಂತರ ಮಕ್ಕಳ ಖರ್ಚಿನ ಬಗ್ಗೆ ಏಕೆ ಮಾತಿಲ್ಲ ? ನಡುರಾತ್ರಿ ಪಬ್ ಗಳಿಗೆ ಹೋಗಿ ಖರ್ಚು ಮಾಡೋರು ಐಟಿ ಉದ್ಯೋಗಿಗಳಲ್ಲ. ಇವರೆಲ್ಲಾ 15 ವರ್ಷಕ್ಕೆ ಕಾರಲ್ಲಿ ಓಡಾಡ್ತಾರೆ. ರಾತ್ರಿ 1-2 ಗಂಟೆಗೆ bike race ಮಾಡ್ತಾರೆ. ಒಂದೇ ಚಕ್ರದಲ್ಲಿ bike ಓಡಿಸಿ, ಕರ್ಕಶ ಶಬ್ದ ಮಾಡಿಸಿ Heart patientಗಳ ಜೀವ ತೆಗೀತಾರೆ, ನಮ್ಮ ನಿದ್ದೆ ಹಾಳು ಮಾಡ್ತಾರೆ. ಇವರು car-bike alteration ಮಾಡಲು ಸಾಕಷ್ಟು ವ್ಯಯಿಸುತ್ತಾರೆ. ಇವರ ಬಗ್ಗೆ ಏಕೆ ಬರೆಯಲ್ಲ ?

ಮುದ್ರಣ/ದೃಶ್ಯ ಮಾಧ್ಯಮಗಳಿಗೂ ಐಟಿಯಿಂದ ಸಾಕಷ್ಟು ಹೊಸ ತಂತ್ರಜ್ಞಾನ ಸಿಕ್ಕಿದೆ. ಕ್ಷಣಾರ್ಧದಲ್ಲಿ News/video edit ಮಾಡೋದಕ್ಕೆ, ಒಂದು ಕಡೆಯಿಂದ ಇನ್ನೊಂದು ಕಡೆ ರವಾನೆಗೆ mic, camera, satellite, TV, computer, mobileನಲ್ಲಿ ಇರೋದು ಐಟಿಯವರು ಬರೆದ ತಂತ್ರಾಂಶವೇ. ಅದರಿಂದಾಗಿಯೇ ಅವರು "BREAKING NEWS" ಕೊಡಲು ಸಾಧ್ಯ.

ಬರೇ ಮಲೆನಾಡು ಅಲ್ಲ. ಪ್ರಪಂಚದ ಎಲ್ಲಾ ಕಡೆ ಕೂಲಿ(non-white-collar-job) ಕೆಲಸ ಮಾಡೋರು ಕಡಿಮೆಯಾಗುತ್ತಿದ್ದಾರೆ. ಅಮೆರಿಕಾದಲ್ಲಿ ಮನೆ ಕೆಲಸ ಮಾಡೋಕೆ, ಕಾರ್ ತೊಳೆಯೋಕೆ, ಶೌಚಾಲಯ ತೊಳೆಯೋಕೆ ಜನ ಸಿಗಲ್ವಂತೆ. ದಕ್ಷಿಣಕನ್ನಡದಲ್ಲಿ ಹೆಂಗಸರು ಮನೆಯಲ್ಲೇ ಕೂತು ಬೀಡಿ ಕಟ್ಟಿದ್ರೆ, ಗಂಡಸರು ಹತ್ತಿರದ ಪಟ್ಟಣಕ್ಕೆ ಹೋಗಿ driver, lift man ಅಥವಾ ಹೊಟೇಲ್ ನಲ್ಲಿ supplier ಕೆಲಸಕ್ಕೆ ಸೇರ್ತಾರೆ. ಹೊಲದಲ್ಲಿ ಬಿಸಿಲಲ್ಲಿ ಕೆಲಸ ಮಾಡೋಕೆ ಯಾರೂ ತಯಾರಿಲ್ಲ. ಈಗಂತೂ ವ್ಯವಸಾಯದಲ್ಲಿ ಏನೂ ಉಳಿಯಲ್ಲ. ಬೆಳೆದದ್ದು ಕೂಲಿ ಕೊಡೋಕೆ ಸರಿ ಆಗುತ್ತೆ. ಇದು 1988-2000ದ ಕಥೆ. ನಾನು ನೋಡಿದ್ದು. ಐಟಿ ಬಂದದ್ದು ಆಮೇಲೆ. ಐಟಿ ಬಂದಿದ್ದರಿಂದ ಕೂಲಿಗಳು ಸಿಗೋದಿಲ್ಲ ಅನ್ನೋದು ಸರಿಯಲ್ಲ.

ಐಟಿಯವರು ಉಳಿತಾಯ ಮಾಡಲ್ಲ ಅಂತ ಯಾರು ಹೇಳಿದ್ದು ? Bank FD, LIC, NSC, PF, PPFಗಳಲ್ಲಿ ಜಮೆ ಆದ ಹಣ ನೋಡಿ.

ಸ್ವಾಮಿನಿಷ್ಠೆ ಅನ್ನೋದು ಬರೇ ಐಟಿ ಅಲ್ಲ, ಯಾವ ಉದ್ಯಮದಲ್ಲೂ ಇಲ್ಲ. ಯಾರು ಹೆಚ್ಚುಕೊಡ್ತಾರೋ ಅಲ್ಲಿಗೆ ದೌಡು. ನಾಳೆ ಹೊಸ ಪತ್ರಿಕೆ/ಚಾನೆಲ್ ಆರಂಭ ಆದ್ರೆ, ಬೇರೆ ಹಳೆ ಪತ್ರಿಕೆ/ಚಾನೆಲ್ ನ ಅನುಭವಸ್ಥರನ್ನು ಜಾಸ್ತಿ ಸಂಬಳ ಕೊಟ್ಟು ಕರೆಸ್ತಾರೆ. ಸೀದಾ ಕಾಲೇಜ್ ನಿಂದ ಬಂದ ಹೊಸ ಮುಖಗಳನ್ನಾ ತಗೋಳಲ್ಲ. ನಮ್ಮೂರಲ್ಲಿ ಕೂಲಿ ಕೆಲಸದವರೂ ಅಷ್ಟೇ. ಹೆಚ್ಚು ಸಂಬಳ, ತಿಂಡಿ/ಚಹಾ ಕೊಡೋರ ಮನೆಗೆ ಕೆಲಸಕ್ಕೆ ಹೋಗ್ತಾರೆ. ಸರಕಾರಿ ಉದ್ಯೋಗಿಳದ್ದು ಸ್ವಾಮಿನಿಷ್ಠೆ ಅಲ್ಲ. 60 ವರ್ಷದ ವರೆಗೆ Job Security ಇದೆ ಮತ್ತು ನಿವೃತ್ತಿ ವೇತನ ಸಿಗುತ್ತೆ ಅಂತ ಅಲ್ಲಿದ್ದಾರೆ. ಅದು ಇಲ್ಲದಿದ್ರೆ ಅವ್ರೂ ಕೂಡಾ ಹೆಚ್ಚು ಕೊಡೋವಲ್ಲಿ ಹೋಗ್ತಾರೆ(ಎಲ್ಲರೂ ಅಲ್ಲ. ಕೆಲವರು ದೇಶಕ್ಕಾಗಿ ನಿಯತ್ತಿನಿಂದ ಕೆಲಸ/ಸಂಶೋಧನೆ/ಅಧ್ಯಾಪನ ಮಾಡೋರು ಇದ್ದಾರೆ). ಇಂದು ಐಟಿಯಲ್ಲಿ ಕೆಲಸಗಾರರು ಸ್ವಾಮಿನಿಷ್ಠೆ ತೋರಿಸಿದ್ರೆ, ನಾಳೆ ಕಂಪನಿ ತನ್ನ ಕೆಲಸಗಾರರಿಗೆ ಕೃತಜ್ಞವಾಗಿರುತ್ತೆ ಅಂತ ಹೇಳೋಕೆ ಆಗಲ್ಲ. ಯಾವಾಗ ಬೇಕಿದ್ರೂ ಮನೆಗೆ ಕಳಿಸಬಹುದು.

ಭಾರತದಲ್ಲಿ ಸಾಕಷ್ಟು Engineers ಇದ್ದಾರೆ. ಅಮೆರಿಕಾದವರಿಗಿಂತ ಕಡಿಮೆ ಸಂಬಳಕ್ಕೆ ದುಡಿತಾರೆ. ಅಮೆರಿಕಾದವರು ಇಲ್ಲಿಯವರಿಂದ ಕೆಲಸ ಮಾಡಿಸೋದಕ್ಕೆ ಐಟಿ ಉತ್ಪನ್ನಗಳ ಬೆಲೆ ಕಡಿಮೆ ಆಗಿದೆ. ಒಂದು ಮೊಬೈಲ್ ಕರೆಗೆ 40 ಪೈಸೆ, free SMS ಬಂದಿದೆ. ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಕೇವಲ ಅಮೆರಿಕಾದವರು ತಂತ್ರಾಂಶ ಬರೆದಿದ್ದರೆ ಇಂದು ಕೂಡಾ ಮೊಬೈಲ್ ಕರೆಗೆ 20 ರೂ. ಇರುತಿತ್ತು. ಜೊತೆಗೆ incomingಗೆ 10 ರೂ. ಇದರಿಂದ ಅಪ್ಪ-ಅಮ್ಮ ದೂರದಲ್ಲಿರುವ ತಮ್ಮ ಮಕ್ಕಳು-ಮೊಮ್ಮಕ್ಕಳೊಂದಿಗೆ ಪ್ರೀತಿಯಿಂದ, ಆರಾಮವಾಗಿ ಗಂಟೆಗಟ್ಟಲೆ ಮಾತಾಡಬಹುದು. Computer+Internet ಇದ್ದರೆ video chat ಕೂಡಾ ಮಾಡಬಹುದು. ಇದು ಈಗ ತುಂಬಾ ಅಗ್ಗವಾಗಿದೆ. ಇದು ಐಟಿಯಿಂದ ಜನಸಾಮಾನ್ಯನಿಗಾದ ಒಂದು ಸರಳ ಉಪಕಾರ. ಹೀಗೆ ಇನ್ನೂ ಪಟ್ಟಿ ಮಾಡಬಹುದು.

ನಮಗೆ ಐಟಿ ಬೇಡ ಅಂದಿದ್ರೆ ಅದು ಚೀನಾ ಅಥವಾ ಇನ್ನು ಯಾವುದೋ ದೇಶಕ್ಕೆ ಹೋಗುತಿತ್ತು. ನಷ್ಟ ಯಾರಿಗೆ ? ನಮಗೇ - ನಿರುದ್ಯೋಗ.

ಐಟಿ ಬಿದ್ರೆ, ಮೊದಲು ಕೆಲಸ ಕಳೆದುಕೊಳ್ಳೊದು HR, support staff, receptionist, watchmen, drivers, accountants ಅಮೇಲೆ Engineers ಮತ್ತು Managers. ಆಮೇಲೆ ಪ್ರಭಾವ ಆಗೋದು food, garment, banking industry ಮೇಲೆ.

ನೆನಪಿರಲಿ ಐಟಿಯವ ಕೆಲಸ ಕಳೆದುಕೊಂಡ್ರೆ ತೊಂದರೆ ಆಗೋದು ಅವನನ್ನು ನಂಬಿರುವ ಹೆತ್ತವರು ಮತ್ತು ಹೆಂಡತಿ ಮಕ್ಕಳಿಗೆ. ಆದ್ದರಿಂದ ಅದಕ್ಕೆ REJOICE ಮಾಡೋದು ತಪ್ಪು.

23 February 2009

ಹೆಸರಲ್ಲೇನಿದೆ ?

ಒಂದು ನಗೆ ಬರಹ ..........

ಹಿಂದೆ ಮಕ್ಕಳಿಗೆ ಹೆಸರಿಡುವಾಗ ದೇವರ ಹೆಸರು ಇಡುತ್ತಿದ್ದರು. ಯಾಕಂದ್ರೆ ಮಕ್ಕಳು ದೇವರ ಥರಾ ಒಳ್ಳೆಯವರಾಗಲಿ ಎಂದು ಅಥವಾ ಮಕ್ಕಳನ್ನು ಕರೆಯುವ ಸಲುವಾಗಿ ದೇವರನಾಮ ತಮ್ಮ ಬಾಯಲ್ಲಿ ಬರುತ್ತೆ ಅಂತ. (ಹಿಂದೆ ಯಮನ ದೂತರು ಬಂದು ಅಜಾಮಿಳನ ಕೊರಳಿಗೆ ಯಮಪಾಶ ಬಿಗಿದಾಗ, "ನಾರಾಯಣ" ಎಂಬ ತನ್ನ ಮಗನನ್ನು ಕರೆದಿದ್ದರಿಂದ ಅವನ ಪ್ರಾಣ ಉಳಿಯಿತಂತೆ.) ಕ್ರಮೇಣ ಈ ಅಭ್ಯಾಸ ಬದಲಾಯಿತು. ಪ್ರಸಿದ್ಧ ವ್ಯಕ್ತಿಗಳ, ಸಿನಿಮಾ ನಟ/ನಟಿಯರ, ಆಟಗಾರರ ಹೆಸರು ಇಡಲು ಆರಂಭಿಸಿದರು. ಈಗಿನವರು ಇನ್ನೂ ಮುಂದುವರಿದಿದ್ದಾರೆ. ಈಗ ಇರುವ ಹೆಸರುಗಳ ಬಗ್ಗೆ "ಅದೇನದು ಹಳೇ ಹೆಸರು ? ಓಬೀರಾಯನ ಕಾಲದ್ದು !!" ಎಂದು ಮೂಗು ಮುರಿಯುತ್ತಾರೆ. ಯಾರೂ ಇಡದ, ಎಲ್ಲಿಯೂ ಇಲ್ಲದ ಹೊಸ ಹೆಸರಿನ ತಲಾಶೆಯಲ್ಲಿದ್ದಾರೆ ಜನ. ಕೆಲವರು ಯಾವುದೋ ಪಾಶ್ಚಾತ್ಯರ ಹೆಸರು ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ಹಳೆಯ ಹೆಸರಿನ ಕೆಲವು ಅಕ್ಷರಗಳನ್ನು ನುಂಗಿ, ಸ್ವರಗಳನ್ನು ಸ್ಥಾನಪಲ್ಲಟಗೊಳಿಸಿ, ಎರಡು ಅರ್ಧ-ಅರ್ಧ ಹೆಸರುಗಳನ್ನು ಸೇರಿಸಿ ಹೊಸ "ಶಬ್ದ"ದ ಸಂಶೋಧನೆ ಮಾಡುತ್ತಾರೆ. ಆ "ಶಬ್ದ"ವನ್ನೇ ಮಗುವಿಗೆ "ಹೆಸರು" ಅಂತ ಇಡುತ್ತಾರೆ.

ಹಿಂದಿನ ಹೆಸರುಗಳಿಗೆ ಒಳ್ಳೆಯ ಅರ್ಥಗಳಿದ್ದವು. ನಾಮ ಅಂಕಿತವಾದರೂ ಅನ್ವರ್ಥವಾಗಲಿ ಎಂದು ಹೆತ್ತವರು ಹಾರೈಸುತ್ತಿದ್ದರು. ಆದರೆ ಈಗಿನವು ಇಟ್ಟವರಿಗೇ ಪ್ರೀತಿ. ಕೆಲವು ಸಂಶೋಧಿತ ಹೆಸರುಗಳು "ಒಳ್ಳೆಯ" ಋಣಾತ್ಮಕ ಅರ್ಥ ಹೊಂದಿವೆ. ಇನ್ನು ಕೆಲವಕ್ಕೆ ಭಾರತದ ಯಾವುದೇ ಭಾಷೆಯ ಅರ್ಥಕೋಶ ತೆರೆದು ನೋಡಿದರೂ ಅರ್ಥ ಸಿಗಲಿಕ್ಕಿಲ್ಲ. ಈ ಪದಗಳಿಗೆ ಹೊಸ ಅರ್ಥ ಕೊಟ್ಟು ಅರ್ಥಕೋಶಕ್ಕೆ ಸೇರಿಸಬೇಕು.

"ಬೆಳದಿಂಗಳ ಬಾಲೆ" ಕನ್ನಡ ಚಲನಚಿತ್ರದಲ್ಲಿ ನಾಯಕನ ಹೆಸರು "ರೇವಂತ್". ನಾಯಕಿ ಇದರ ಅರ್ಥದ ಬಗ್ಗೆ ಕೇಳಿದಾಗ ತುಂಬಾ ಕಷ್ಟಪಟ್ಟು ಕಂಡುಹಿಡಿಯುತ್ತಾನೆ - ರೇವಂತ್ ಅಂದ್ರೆ "ಸಮುದ್ರದ ದಂಡೆಯಲ್ಲಿ ಕುದುರೆ ತೊಳೆಯುವವ" ಎಂದು.

ಕೆಲವರು ಈಗಿರುವ ಹೆಸರು ದುರಾದೃಷ್ಟಕರ ಅಂತ, ಸಂಖ್ಯಾಶಾಸ್ತ್ರಜ್ಞರ ಜೇಬು ತುಂಬಿಸಿ ಹೆಸರುಗಳನ್ನು ಬದಲಾಯಿಸುತ್ತಾರೆ. ಹೆಸರಿನಲ್ಲಿ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸುತ್ತಾರೆ ಅಥವಾ ಬದಲಾಯಿಸುತ್ತಾರೆ. ಹೀಗೆ ಹೆಸರುಗಳನ್ನು ಬದಲಾಯಿಸುವ ಹಿಂದಿ ಚಲನಚಿತ್ರ ನಟ/ನಟಿಯರ ಬಗ್ಗೆ ಕಳೆದ ವರ್ಷ ಟಿವಿಯಲ್ಲಿ ಪ್ರಸಾರವಾದ ಒಂದು ಕಾರ್ಯಕ್ರಮವನ್ನು ನಾನು ನೋಡಿದ್ದೆ.

ತಪ್ಪು ಅಂತ ಹೇಳ್ತಾ ಇಲ್ಲ, ಆದ್ರೆ ನಾನು ಕೇಳಿದ ಕೆಲವು ಹೆಸರುಗಳು ಹೀಗಿವೆ:

ಪ್ರಮಾದ್ : ಅಂದರೆ "ತಪ್ಪು" (ಬಹುಶಃ ಇದು ಪ್ರಮೋದ್ ನ ರೂಪಾಂತರ). ಈತ ಯಾವಾಗ್ಲೂ ತಪ್ಪು ಮಾಡ್ತಿರ್ತಾನೆ ಅಂತನಾ ? ಇನ್ನೇನೋ ಗೊತ್ತಿಲ್ಲ.

ಅಂಜೇಶ್ : ಇದು ಅಂಜನಾ+ರಾಜೇಶ್ ಇರಬಹುದು. ತುಂಬಾ ಧೈರ್ಯ ಇರುವವನಿಗೆ ಧೀರಜ್ ಅಂತಾರೆ. ಈತ ತುಂಬಾ ಹೆದರು ಪುಕ್ಕಲ.

ಮಗಧ್ : ಹಿಂದೆ ಈ ಹೆಸರಿನ ದೇಶ ಇತ್ತಂತೆ. ಪರ್ವಾಗಿಲ್ಲ ಭರತ್, ಭಾರತಿ ಎಂಬ ಹೆಸರುಗಳಿವೆ.

ಚಾರ್ಮೇಶ್ : ಒಂದು ಕಾರ್ ಮೇಲೆ ಈ ಹೆಸರು ನೋಡಿದೆ. ಏನು ಅಂತ ಅರ್ಥ ಆಗ್ಲಿಲ್ಲ.

ಇನ್ನೂ ತುಂಬಾ ಕೇಳಿದ್ದೀನಿ. ನೆನಪಿಗೆ ಬರುತ್ತಿಲ್ಲ. ನಿಮಗೆ ಇಂಥಾ ಹೆಸರುಗಳು ಗೊತ್ತಿದ್ದರೆ ಕಳಿಸಿ.

ನಾನೂ ಕೆಲವೊಂದು ಹೊಸ ಹೆಸರುಗಳನ್ನು ಸಂಶೋಧಿಸಬಲ್ಲೆ....
ಕರ್ಕೇಶ್, ಪೋಂಕ್ರೇಶ್, ಅಂತೇಶ್, ರಮಿತಾಭ್, ಕಾಮಂತ್, ಚಿರಂತ್, ಸುವಂತ್, ಅಜಿತೇಶ್, ಅಜಿಷೇಕ್, ಅನುಜಿತ್, ಅನುಚಿತ್, ಕಜಯ್, ಬೃಜಯ್, ಬಜ್ಜಯ್, ಕೃತಿಕ್, ತಿಕ್ಕೇಶ್, ತಿಕ್ಲೇಶ್, ಮಟಾಶ್ (?), ಮಾಗೇಶ್, ಗಣಿಕಾಂತ್, ಗಣಿವಂತ್, ಪ್ರೀತಿಕಾ, ಕವಿಕಾ, ಜತಿಕಾ, ಮತ್ತಿಖಾ, ಭೋಂಪ್ಳೊ, ಮಿಲಿನಿ, ಲಾಲಿನಿ, ಕಾಳಿನಿ, ಕಾಳೇಂದ್ರಿ ....... ಹೀಗೆ.

ಚೆನ್ನಾಗಿದೆ ಅಂತ ಅನಿಸಿದ್ರೆ ಹೆಕ್ಕಿಕೊಳ್ಳಿ.

ಆದ್ರೂ ............. ಹೆಸರಲ್ಲೇನಿದೆ ? ಅಲ್ವೇ ?

12 February 2009

My feedback on TIMEX watch

I have heard many words about Timex.
"The most famous watch in USA. Since 1854. In 75 countries. 1 billion watches sold ...... bla.....bla .....bla....."

But it is the worst watch I have ever seen or heard.

I bought a TIMEX COGNOSCENTI MEN (T2M429) watch from a Timex showroom at Jayanagar, Bangalore.

In the last two months I visited the dealer 6 times, exchanged twice & now the 3rd piece I have is a defect.
The first piece was stopping at every midnight when the date changes.
The second piece was showing 14hrs in the small dial when the time was 1pm (It is supposed to show 13hrs.).
The third piece was working fine for 1 month. Now it has stopped working !!!

If one piece has problem, it is Ok. But 3 pieces in a row !!!

I have 2 other watches. For one of them(Sonata), 8 years back I paid Rs 450 and it is still working without slip in time/date/week.

When I go for Timex, I expect quality & value for money.
At the end of the day I found that it is a junk.

My colleagues & friends are making fun of it.
I am getting insulted & irritated with it.

It is a worst experience.

09 February 2009

ಕನ್ನಡ ಜೋಂಕ್ಸ್

ಬಂತಾ ಔಷದಿ ಅಂಗಡಿಯಿಂದ ನೆಗಡಿಗೆ ಮಾತ್ರೆ ತಂದ.
ತಗೊಳೋಕೆ ಮುಂಚೆ ಅದರ ಅಂಚುಗಳನ್ನು(sides) ತೆಗೆದ. ಯಾಕೆ ?
ಯಾಕಂದ್ರೆ, ಮಾತ್ರೆಯಿಂದ ಯಾವುದೇ side effects ಆಗ್ಬಾರ್ದು ಅಂತ.

ಒಬ್ಬ ೫ ವರ್ಷದ ಪೋರ ಅಂಗಡಿಗೆ ಹೋಗಿ "ಅಂಕಲ್ ಒಂದು small ಕೊಡಿ".
ಅಂಗಡಿಯವ : "ಏನಪ್ಪಾ ಇಷ್ಟು ಚಿಕ್ಕ ವಯಸ್ಸಲ್ಲಿ ಸಿಗರೇಟ್ ಸೇದ್ತಿಯಾ ?"
ಪೋರ : "ಅಯ್ಯೋ, ಅದು ನನಗಲ್ಲ, ನನ್ನ ತಮ್ಮನಿಗೆ. ನಂಗೆ ಒಂದು king ಕೊಡಿ."

ಸಂತಾ, ಬಂತಾ ಮತ್ತು ಕಂತಾ ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು.
ಅದನ್ನು ಪೊಲೀಸ್ ನೋಡಿ, overload ಎಂದು ಗಾಡಿ ನಿಲ್ಲಿಸಲು ಕೈ ಸನ್ನೆ ಮಾಡಿದ.
ಆವಾಗ ಸಂತಾ "ಅಯ್ಯೋ ನಾವು ಈಗ್ಲೇ ೩ ಜನ ಇದ್ದೀವಿ, ಇನ್ನು ನಿನ್ನನ್ನು ಎಲ್ಲಿ ಕೂರ್ಸೋದು" ಅಂದು ಗಾಡಿ ನಿಲ್ಲಿಸದೆ ಹೊಗೇ ಬಿಟ್ಟ.

ರೋಗಿ : ಡಾಕ್ಟ್ರೇ, ನಾನು ಬದುಕಿ ಉಳಿಯುವ ಸಾಧ್ಯತೆ ಇದೆಯೇ ?
ವೈದ್ಯ : 10೦ ಪರ್ಸೆಂಟ್ !! ಯಾಕಂದ್ರೆ ದಾಖಲೆಗಳ ಪ್ರಕಾರ, ನಿನ್ನ ತರಹದ ರೋಗ ಇರೋರು ಹತ್ತರಲ್ಲಿ ಒಂಭತ್ತು ಜನ ಸಾಯ್ತಾರೆ. ಈವಾಗ್ಲೆ ಒಂಭತ್ತು ಜನ ಸತ್ತಿದ್ದಾರೆ. ನೀನು ಹತ್ತನೇಯವನು.

ಒಬ್ಳು ಹುಡುಗಿ ತನ್ನ ಪ್ರಿಯತಮನ ಬಳಿ ಪ್ರೀತಿಯಿಂದ ಹರಟೆ ಹೊಡೀತಾ, ಭಾವುಕಳಾಗಿ ಹೇಳಿದ್ಲು "ದಯವಿಟ್ಟು ಆ ಮೂರು ಶಬ್ದಗಳನ್ನು ಹೇಳು, ಅದರಿಂದ ನಾನು ಆಕಾಶದಲ್ಲಿ ಹಾರಾಡಬಹುದು".
ಅವ : "ಹೋಗಿ ನೇಣು ಹಾಕ್ಕೋ".

ಶಾಲೆಯ ಮುಂದೆ ಹಾಕಲು ಒಂದು ಫಲಕ ಬರೆಯುವಂತೆ ಒಬ್ಬ ವಿದ್ಯಾರ್ಥಿಗೆ ಹೇಳಿದ್ರು. ಅವ ಹೀಗೆ ಬರೆದ - "ಎಚ್ಚರಿಕೆ !! ನಿಧಾನವಾಗಿ ಚಲಿಸಿ, ಮಕ್ಕಳನ್ನು ಕೊಲ್ಲಬೇಡಿ, ಶಿಕ್ಷಕರಿಗಾಗಿ ಕಾಯಿರಿ".

ಸಿಇಟಿಯಲ್ಲಿ ಸೀಟು ಆಯ್ಕೆ ಮಾಡಿಕೊಂಡ ನಂತರ ಮಗನ ಜತೆ ಹೆತ್ತವರು ಕಾಲೇಜು ನೋಡಲು ಹೋದ್ರು. ಅಲ್ಲಿ ಸಿಕ್ಕಿದ watchman ಹತ್ರ "ಈ ಕಾಲೇಜ್ ಚೆನ್ನಾಗಿದೆಯಾ ?" ಅಂತ ಕೇಳಿದ್ರು. ಅದಕ್ಕೆ ಅವನು ಉತ್ತರಿಸಿದ - "ಬಹುಶಃ ಒಳ್ಳೆಯದೇ ಇರಬೇಕು. ನಾನು ಇಲ್ಲೇ Engineering ಓದಿದೆ. ಓದು ಮುಗಿದ ತಕ್ಷಣ placement ಆಯ್ತು".

ಒಬ್ಬಾತ ಆಸ್ಪತ್ರೆಗೆ ದಾಖಲಾದ ತನ್ನ ಗರ್ಭಿಣಿ ಹೆಂಡತಿಯ ಬಗ್ಗೆ ವಿಚಾರಿಸಲು ಕರೆ ಮಾಡಿದ. ಕರೆ wrong connection ಆಗಿ cricket stadiumಗೆ ಹೋಯ್ತು. ಆ ಕಡೆಯಿಂದ ಬಂದ ಉತ್ತರ ಕೇಳಿ ಈತ ಮೂರ್ಛೆ ಹೋದ. ಉತ್ತರ ಹೀಗಿತ್ತು - "8 are already out, 2 more will be out hopefully by lunch, the first one was a duck".

03 February 2009

ಇಹ ಲೋಕ ಯಾತ್ರೆ ಮುಗಿಸಿದ ಯಕ್ಷರಂಗದ ಸಾರ್ವಭೌಮ ಕೆರೆಮನೆ ಶಂಭುಹೆಗಡೆ

ಕೆರೆಮನೆ ಶಂಭು ಹೆಗಡೆ

ಬಡಗುತಿಟ್ಟಿನ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಶಂಭು ಹೆಗಡೆ ಇನ್ನಿಲ್ಲ. ತಂದೆ ಶಿವರಾಮ ಹೆಗಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಇವರು ಯಕ್ಷಗಾನದಲ್ಲಿ ಅಪರಿಮಿತವಾದುದನ್ನು ಸಾಧಿಸಿ ಮೇರುಶಿಖರವನ್ನೇರಿದರು. ಇವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಯಾವುದೇ ಸಾಧಕರು ತಮ್ಮ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗಲೇ ಕೊನೆಯುಸಿರೆಳೆಯಲು ಇಚ್ಛಿಸುತ್ತಾರೆ. ಈ ವಿಷಯದಲ್ಲಿ ಶಂಭು ಹೆಗಡೆಯವರು ಭಾಗ್ಯಶಾಲಿಗಳು. ಯಾವುದೋ ಒಂದು ಸರಕಾರಿ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿ, ೨೦-೩೦ ವರ್ಷ ಮನೆಯಲ್ಲಿ ದಿನವೆಣಿಸುತ್ತಿರುವ ಯಾರಾದರೂ ಸತ್ತರೆ, "ಇವರ ಮರಣದಿಂದ, ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟ !!! " ಎನ್ನುತ್ತಾರೆ. ಆದರೆ ಕೊನೆಯವರೆಗೂ ಕಾರ್ಯಪ್ರವೃತ್ತರಾಗಿದ್ದ ಹೆಗಡೆಯವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ. ಇದ್ದಿದ್ದರೆ ಇನ್ನಷ್ಟು ಸಾಧಿಸುತ್ತಿದ್ದರು. ಇವರ ಮಕ್ಕಳು, ಮೊಮ್ಮಕ್ಕಳ ಮೇಲೆ ಕೆರೆಮನೆ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇದೆ.


ಈ ಹಿರಿಯರ ಆತ್ಮಕ್ಕೆ ಇಡಗುಂಜಿ ಮಹಾಗಣಪತಿ ಶಾಂತಿಯನ್ನು ದೊರಕಿಸಿ ಕೊಡಲಿ.ಹೆಚ್ಚಿನ ಮಾಹಿತಿಗಾಗಿ ಓದಿ:
ಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ

ಕವಿದುಬಿದ್ದರು ಶಂಭುಹೆಗಡೆ ಹರಿಯ ಚರಣದಲಿ

Keremane Shambhu Hegde02 February 2009

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?
ಆಥವಾ ಕೇವಲ ಭಾರತದ ಬಡತನ ಹಾಗೂ ಕೊಳೆಗೇರಿಗಳನ್ನು ತೋರಿಸಿ ವಿದೇಶದ ನಿರ್ದೇಶಕ/ನಿರ್ಮಾಪಕರು ದುಡ್ಡು ಮಾಡುತ್ತಿದ್ದಾರೆಯೇ ? ಅಮೇರಿಕಾದಲ್ಲಿ ಬಡವರಿಲ್ಲವೇ ? ಕೊಳೆಗೇರಿಗಳಿಲ್ಲವೇ ? ಭ್ರಷ್ಟಾಚಾರವಿಲ್ಲವೇ ? ನಿರ್ಜನ ಪ್ರದೇಶದಲ್ಲಿ ಹೋಗುತ್ತಿರುವವರನ್ನು ನಿಲ್ಲಿಸಿ, ಗನ್ ತೋರಿಸಿ ದುಡ್ಡು ಕೀಳುವವರಿಲ್ಲವೇ ? ದುಡ್ಡು ಕೊಡಲು ನಿರಾಕರಿಸಿದಾಗ ಕೊಲ್ಲುವುದಿಲ್ಲವೇ ? ಕೆಲಸಕ್ಕೆ ಅಥವಾ ಉನ್ನತ ವ್ಯಾಸಂಗಕ್ಕೆಂದು ಭಾರತದಿಂದ ಅಲ್ಲಿಗೆ ಹೋದವರು ಮೃತರಾಗಿಲ್ಲವೇ ? ಆದರೆ ನಾನು ನೋಡಿರುವ ಇಂಗ್ಲಿಷ್ ಚಿತ್ರಗಳಲ್ಲಿ ಕೇವಲ ಐಷಾರಾಮಿ ಮನೆ/ಆಫೀಸು/ಕಟ್ಟಡ/ವಿಮಾನ/ಹಡಗುಗಳನ್ನೇ ತೋರಿಸಿದ್ದಾರೆ. ವಿದೇಶೀಯರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಒಂದೆರಡು ಪ್ರಶಸ್ತಿಗಳು ಬಂದಾಗ ಇಲ್ಲಿನ ಕೆಲ ನಟರು ಕೊಂಬು ಬಂದವರ ಥರ ಏಕೆ ಆಡುತ್ತಾರೆ ? ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಈ ಚಿತ್ರ ಮಾಡಿದ್ದರೆ ಇಲ್ಲಿ ಹಾಗೂ ವಿದೇಶಗಳಲ್ಲಿ ಇಷ್ಟು ಸುದ್ದಿಯಾಗುತಿತ್ತೆ ? ಇಲ್ಲಿನ ೧-೨ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದೇ ವಾರಕ್ಕೆ ನಾಪತ್ತೆಯಾಗುತಿತ್ತು.

ವೆಬ್ ದುನಿಯಾದಲ್ಲಿ ಬಂದ ಬರಹ

ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ಬರಹ

ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ

ಇದು ಯಾವುದಾದರೂ ಭಾರತೀಯ ಭಾಷೆಯಲ್ಲಿ ಮಾಡಿದ್ದರೆ ಅಥವಾ ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಇಂಗ್ಲಿಷ್ ನಲ್ಲಿ ಮಾಡಿದ್ದರೆ Oscar ಬರುತ್ತಿತ್ತೇ ? ನಿಮ್ಮ ಅನಿಸಿಕೆ ಹೇಳಿ.