29 October 2010

ತತ್ತ್ವೋಪದೇಶ - ೪


ಹರಿ ಹರಿ ನಿನ್ನನು ಒಲಿಸಲುಬಹುದು, ನರಜನರನೊಲಿಸೋದು ಬಲು ಕಷ್ಟ  - ಪುರಂದರದಾಸರು

22 October 2010

ತತ್ತ್ವೋಪದೇಶ - ೩


ಪರಿಶುದ್ಧವಾದ ಪ್ರಾರ್ಥನೆ ನಮ್ಮ ಮನಸ್ಸಿಗೆ ನೈತಿಕ ಸ್ಥೈರ್ಯವನ್ನು ಕೊಡುತ್ತದೆ ; ಆತ್ಮಬಲವನ್ನು ಹೆಚ್ಚಿಸುತ್ತದೆ.

16 October 2010

ಯಾಕೋ ಗೊತ್ತಿಲ್ಲ - ೧

ರಾಜಕಾರಣಿಗಳು ಓಟು ಕೇಳಲು ಬರೋವಾಗ ನಾಲಿಗೆಗೆ ಸಕ್ಕರೆ ಪಾಕ ಮೆತ್ತಿಕೊಂಡು ಬರ್ತಾರೆ.
ವಿಧಾನಸೌಧಕ್ಕೆ ಹೋಗೋವಾಗ ಹಾಗಲಕಾಯಿ ರಸ ಮೆತ್ತಿಕೊಂಡು ಹೋಗ್ತಾರೆ.
ಬೇರೆ ಸಮಯದಲ್ಲಿ ನೋಟಿನ ಕಂತೆಗಳನ್ನೇ ನುಂಗ್ತಾರೆ.

ಯಾಕೋ ಗೊತ್ತಿಲ್ಲ !

ಹೇ ದೇವಾ ನಿನ್ನ ಮಹಿಮೆ ಅಪಾರ !

09 October 2010

ಬದಲಾವಣೆ ಅತ್ಯಗತ್ಯ


ಪ್ರಸಕ್ತ ಕರ್ನಾಟಕ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿ ನೋಡಿದಾಗ ನಿಮಗೆ ಏನನ್ನಿಸುತ್ತದೆ ?

ಜನರು ೫ ವರ್ಷಗಳಿಗಾಗಿ ಆಯ್ಕೆ ಮಾಡಿ ಕಳುಹಿಸಿದ ಪ್ರತಿನಿಧಿಗಳು ರಾಜ್ಯದ/ಜನರ ಅಭಿವೃದ್ಧಿಯನ್ನು ಕಡೆಗಣಿಸಿ ಈ ಪರಿ ಸ್ವಂತ ಲಾಭಕ್ಕಾಗಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆಗಳನ್ನು ಕೇಳಿ ಪರಿಹಾರ ಹುಡುಕುವುದನ್ನು ಬಿಟ್ಟು ರೆಸಾರ್ಟ್ ಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಗಂಟೆಗೆ ಲಕ್ಷಗಟ್ಟಲೆ ಖರ್ಚಾಗುವ ವಿಧಾನ ಸಭಾ ಕಲಾಪದಲ್ಲಿ ಫಲದಾಯಕವಲ್ಲದ ಚರ್ಚೆ(ಜಗಳ)ಮಾಡಿ ಸಾಮಾನ್ಯ ಜನರ ತೆರಿಗೆಯ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಶಾಸಕರು/ಸಂಸದರು ಸಮಾಜ ಸೇವಕರು, ಸಮಾಜ ಸೇವಕರಿಗೆ ಯಾವುದೇ ವೇತನವಿರುವುದಿಲ್ಲ, ಸ್ವಂತ ಖರ್ಚಿನಲ್ಲಿ ಜನರ ಸೇವೆ ಮಾಡುತ್ತಾರೆ ಎಂಬುದು ನನ್ನ ಅನಿಸಿಕೆ. ಆದರೆ ಭಾರತದಲ್ಲಿ ಶಾಸಕರು/ಸಂಸದರಿಗೆ ಗೌರವಧನ, ಉಚಿತ ದೂರವಾಣಿ ಕರೆಗಳು, ಉಚಿತ ಬಸ್/ರೈಲು ಪ್ರಯಾಣ ಹಾಗೂ ಇನ್ನೇನೋ ಭತ್ಯೆಗಳನ್ನು ಕೊಡಲಾಗುತ್ತದೆ. ಅಲ್ಲದೇ ಇತ್ತೀಚೆಗೆ ಅದನ್ನು ಒಂದಕ್ಕೆ ನಾಲ್ಕರಷ್ಟು ಏರಿಸಲಾಗಿದೆ ಯಾಕೋ ಗೊತ್ತಿಲ್ಲ. ಅಧಿವೇಶನದಲ್ಲಿ ಯಾವುದೇ ಚರ್ಚೆ ಇಲ್ಲದೆ ಸರ್ವ ಪಕ್ಷಗಳ, ಸರ್ವ ಶಾಸಕರ/ಸಂಸದರ ಸರ್ವಾನುಮತಿಯಿಂದ ಅಂಗೀಕಾರಕೊಳ್ಳುವ ಮಸೂದೆ ಇದೊಂದೇ ಅನ್ನಿಸುತ್ತೆ.

ಟಿಡಿಎಸ್ ನಿಂದ ತಿಂಗಳು ತಿಂಗಳು ನಮ್ಮ ವೇತನದಿಂದ ಕಡಿತಗೊಳ್ಳುವ ತೆರಿಗೆಯನ್ನು ನೋಡಿ ನಮ್ಮ ಹೊಟ್ಟೆ ಚುರ್ ಎನ್ನುತ್ತದೆ. ಇನ್ನು ನಮ್ಮ ತೆರಿಗೆಯ ಹಣ ಈ ಥರ ವ್ಯರ್ಥಗೊಳಿಸುವುನ್ನು ಕಂಡರೆ ಹೊಟ್ಟೆಯಲ್ಲಿ ಪೆಟ್ರೋಲ್ ಹಾಕಿ ಬೆಂಕಿಯಿಟ್ಟ ಹಾಗಾಗುತ್ತದೆ. ಚುನಾವಣೆಗಳಿಗೆ ಸಾವಿರಾರು ಕೋಟಿ ರುಪಾಯಿ ವ್ಯಯಿಸಿದರೆ, ಇವರು ೫ ವರ್ಷಕ್ಕೆ ಮುಂಚೆನೇ ರಾಜೀನಾಮೆ ಕೊಟ್ಟು, ಪಕ್ಷ ಬದಲಾಯಿಸಿ, ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆ ನಡೆಸುತ್ತಾರೆ.

ಇವೆಲ್ಲವನ್ನು ಯೋಚನೆ ಮಾಡಿ ನೋಡಿದಾಗ ನಮ್ಮ ಪ್ರಜಾಪ್ರಭುತ್ವ/ಚುನಾವಣಾ ವಿಧಾನಗಳಲ್ಲಿ ಕೆಲವೊಂದು ಬದಲಾವಣೆಗಳು ಅಗತ್ಯ ಎಂದು ನಿಮಗೆ ತೋಚುತ್ತಿಲ್ಲವೇ ?

ನನಗೆ ಕೆಲವೊಂದು ಬದಲಾವಣೆಗಳು ಅಗತ್ಯವೆಂದು ತೋರುತ್ತವೆ.
  • ಒಂದು ಕ್ಷೇತ್ರದಲ್ಲಿ ೫ ವರ್ಷಕ್ಕೆ ಒಮ್ಮೆ ಮಾತ್ರ ಚುನಾವಣೆ. ಶಾಸಕರು ರಾಜೀನಾಮೆ ಕೊಟ್ಟರೆ, ನಿಧನ ಹೊಂದಿದರೆ ಚುನಾವಣೆ ನಡೆಸುವಂತಿಲ್ಲ.
  • ಆಯ್ಕೆಗೊಂಡಿರುವ ಶಾಸಕ ಅವಧಿಗೆ ಮುನ್ನ ರಾಜೀನಾಮೆ ಕೊಟ್ಟು ಅದೇ ಪಕ್ಷದಿಂದ ಬೇರೆ ಚುನಾವಣೆಗೆ(ಸಂಸತ್ತು) ೫ ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ.
  • ಆಯ್ಕೆಗೊಂಡಿರುವ ಶಾಸಕ ಅವಧಿಗೆ ಮುನ್ನ ರಾಜೀನಾಮೆ ಕೊಟ್ಟು ಬೇರೆ ಪಕ್ಷದಿಂದ ಚುನಾವಣೆಗೆ ೫ ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ. ರಾಜೀನಾಮೆ ಕೊಟ್ಟು ನಿಗಮ/ಮಂಡಲಿಗಳ ಅಧ್ಯಕ್ಷತೆ ಸೇರಿ ಯಾವುದೇ ಲಾಭದಾಯಕ ಹುದ್ದೆ ಸ್ವೀಕರಿಸುವಂತಿಲ್ಲ.
  • ಒಬ್ಬ ಒಂದೇ ಬಾರಿಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವಂತಿಲ್ಲ. ಎರಡೂ ಕಡೆ ಗೆದ್ದರೆ ಒಂದು ಕಡೆ ರಾಜೀನಾಮೆ, ಮತ್ತೆ ಚುನಾವಣೆ !
  • ೫ ವರ್ಷಕ್ಕೆ ಮೊದಲು ವಿಧಾನಸಭೆ ವಿಸರ್ಜಿಸುವಂತಿಲ್ಲ. ಒಂದು ವೇಳೆ ಸರಕಾರ ಬಿದ್ದರೆ ರಾಜ್ಯಪಾಲ/ರಾಷ್ಟ್ರಪತಿ ಆಳ್ವಿಕೆ ಬರಬೇಕು. ಅಥವಾ ರಾಜ್ಯಪಾಲರು ಸರ್ವಪಕ್ಷ ಸರಕಾರ ರಚಿಸಿ ಸಚಿವರನ್ನು ನೇಮಕ ಮಾಡಬೇಕು. ಆದರೆ ಇಲ್ಲೂ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಯಬಹುದು. ರಾಜ್ಯಪಾಲರು ಪಕ್ಷಾತೀತರಾಗಿದ್ದರೆ ಇದು ಸಾಧ್ಯವಾಗಬಹುದು.
  • ಯಾವುದೇ ಚುನಾವಣಾ ಮತ ಪತ್ರದಲ್ಲಿ ಹೊಸತೊಂದು ಆಯ್ಕೆ ಇರಬೇಕು. "ನನಗೆ ಯಾರೂ ಬೇಡ"(None of the Above) ಎಂಬುದು. ಒಂದು ವೇಳೆ ಈ ಆಯ್ಕೆಗೆ ಅತಿ ಹೆಚ್ಚು ಮತಗಳು ಬಂದರೆ ಮರು ಚುನಾವಣೆಯಾಗಬೇಕು ಆದರೆ ಹಿಂದೆ ಸ್ಪರ್ಧಿಸಿದವರಲ್ಲಿ ಯಾರೂ ಮತ್ತೆ ಸ್ಪರ್ಧಿಸುವಂತಿಲ್ಲ..... ೫ ವರ್ಷಗಳ ಕಾಲ(ಯಾಕೆಂದರೆ ಜನರು ಆವಾಗಲೇ ಅವರನ್ನು ತಿರಸ್ಕರಿಸಿದ್ದಾರೆ). ಹೀಗಾದರೆ ಹೆಚ್ಚಿನ ವಿದ್ಯಾವಂತರು ಮತದಾನ ಮಾಡುತ್ತಾರೆ ಮತ್ತು ಪ್ರತಿ ಕ್ಷೇತ್ರದಲ್ಲಿ ೯೫% ಕ್ಕೂ ಹೆಚ್ಚು ಮತದಾನವಾಗಬಹುದು ಎಂಬುದು ನನ್ನ ಅನಿಸಿಕೆ.

ಇವುಗಳಲ್ಲಿ ಎಷ್ಟು ಪ್ರಾಯೋಗಿಕವೋ ಗೊತ್ತಿಲ್ಲ ಆದರೆ ಹೀಗೇ ಇನ್ನೂ ಕೆಲವು ಸುಧಾರಣೆ/ಬದಲಾವಣೆಗಳನ್ನು ಮಾಡಬಹುದು. ಚುನಾವಣಾ ಆಯೋಗ ಇಂತಹ ಬದಲಾವಣೆಗಳನ್ನು ನಿಸ್ಪಕ್ಷಪಾತವಾಗಿ ಜಾರಿಗೆ ತರಬೇಕು. ಆದರೆ ಸಂವಿಧಾನದಲ್ಲಿ ಬದಲಾವಣೆ ಮಾಡಬೇಕು, ಸಂಸತ್ತಿನಲ್ಲಿ ಅಂಗೀಕಾರವಾಗಬೇಕು ಎಂದರೆ ಅಸಾಧ್ಯ. ಅಲ್ಲಿ ಸರ್ವಾನುಮತದಿಂದ ತಿರಸ್ಕರಿಸಲ್ಪಡುತ್ತದೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಸ್ವಾಮೀ ?

05 October 2010

ಸುಮ್ನೆ ತಮಾಷೆಗೆ - ೧

ಎಳೆದಷ್ಟು ಉದ್ದ ಆಗುತ್ತೆ, ಏನು ?
ರಬ್ಬರ್.

ಎಳೆದಷ್ಟು ಗಿಡ್ಡ ಆಗುತ್ತೆ, ಏನು ?
ಸಿಗರೇಟ್.

ಮಾಡಿದಷ್ಟು ಜಾಸ್ತಿ ಆಗುತ್ತೆ, ಏನು ?
ಆಫೀಸ್ ಕೆಲ್ಸ :-)