22 March 2009

ರಾಮನವಮಿ ಸಂಗೀತೋತ್ಸವ ೨೦೦೯

ಯುಗಾದಿ-ರಾಮನವಮಿ ಬಂತು ಅಂದ್ರೆ ಬೆಂಗಳೂರಿನ ಶಾಸ್ತ್ರೀಯ ಸಂಗೀತಾಭಿಮಾನಿಗಳಿಗೆ ಸಂಗೀತದ ರಸದೌತಣ. ಚೆನ್ನೈನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಉತ್ಸವದಂತೆ ಬೆಂಗಳೂರಿನಲ್ಲಿ ರಾಮನವಮಿ ಸಂದರ್ಭದಲ್ಲಿ ನಡೆಯುತ್ತದೆ. ಶೇಷಾದ್ರಿಪುರ, ಶಂಕರಪುರ, ನರಸಿಂಹರಾಜ ಕಾಲೋನಿ ಹೀಗೆ ತುಂಬಾ ಕಡೆಗಳಲ್ಲಿ ಸಂಗೀತೋತ್ಸವಗಳು ನಡೆಯುತ್ತವೆ. ಆದರೆ ಚಾಮರಾಜ ಪೇಟೆಯ ಶ್ರೀ ರಾಮ ಸೇವಾ ಮಂಡಳಿಯವರು ಕೋಟೆ ಪ್ರೌಢ ಶಾಲೆಯ ಮೈದಾನದಲ್ಲಿ ನಡೆಸುವ ರಾಮನವಮಿ ಸಂಗೀತೋತ್ಸವ ತುಂಬಾ ಪ್ರಸಿದ್ಧ. ಜನರು ಇದಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ.

ಸಾಮಾನ್ಯವಾಗಿ ಯುಗಾದಿಯಂದು ಕುಮಾರಿ ಕನ್ಯಾಕುಮಾರಿಯವರ ಪಿಟೀಲು ಸಹಕಾರದೊಂದಿಗೆ ಕದ್ರಿ ಗೋಪಾಲನಾಥ್ ಅವರ ಕಛೇರಿಯೊಂದಿಗೆ ಆರಂಭವಾಗುವ ಉತ್ಸವ ೩೫-೪೦ ದಿನಗಳವರೆಗೆ ನಡೆಯುತ್ತದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಸಂಗೀತದ ಅತಿರಥ-ಮಹಾರಥರು ಇಲ್ಲಿ ಬಂದು ಗಾಯನ-ತನಿ ಸಂಗೀತ ಕಛೇರಿ ನಡೆಸಿಕೊಡುತ್ತಾರೆ. ಹಿಂದೆ ಸುಬ್ಬುಲಕ್ಷ್ಮೀ, ಭೀಮಸೇನ್ ಜೋಶಿ, ಚೆಂಬೈ ವೈದ್ಯನಾಥ ಭಾಗವತರು, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಟಿ ಆರ್ ಮಹಾಲಿಂಗಮ್, ಕುನ್ನಾಕುಡಿ ವೈದ್ಯನಾಥನ್ ಎಲ್ಲಾ ಬಂದು ಕಛೇರಿ ನಡೆಸಿಕೊಡ್ತಾ ಇದ್ರು. ಈಗ ವಿದ್ಯಾಭೂಷಣ, ಆರ್ ಕೆ ಶ್ರೀಕಂಠನ್, ಆರ್ ಕೆ ಪದ್ಮನಾಭ, ಎಸ್ ಶಂಕರ್, ಎಂ ಎಸ್ ಶೀಲಾ, ರುದ್ರಪಟ್ಣಂ ಸಹೋದರರು, ಬೆಂಗಳೂರು ಸಹೋದರರು, ಮೈಸೂರು ಸಹೋದರರು, ಸ್ಮಿತಾ ಬೆಳ್ಳೂರು, ಹಾರ್ಮೋನಿಯಮ್ ರಾಮದಾಸ್, ಪ್ರವೀಣ್ ಗೋಡ್ಖಿಂಡಿ, ಸುಮಾ ಸುಧೀಂದ್ರ, ಜ್ಯೋತ್ಸ್ನಾ ಶ್ರೀಕಾಂತ್, ಕಲಾವತಿ ಅವಧೂತ್, ಪಟ್ಟಾಭಿರಾಮ ಪಂಡಿತ್, ವಿನಯ್ ಶರ್ವ, ಅನಂತರಾಮ-ಅಮಿತ್ ನಾಡಿಗ್, ಯೇಸುದಾಸ್, ಕದ್ರಿ ಗೋಪಾಲನಾಥ್, ಕನ್ಯಾಕುಮಾರಿ, ಎಂ ಎಸ್ ಗೋಪಾಲಕೃಷ್ಣನ್, ಮ್ಯಾಂಡೋಲಿನ್ ಶ್ರೀನಿವಾಸ್, ಎನ್ ರಮಣಿ, ಪಿ ಉನ್ನಿಕೃಷ್ಣನ್, ಎಂ ಬಾಲಮುರಳಿ ಕೃಷ್ಣ, ಗಣೇಶ್-ಕುಮಾರೇಶ್, ಬಾಂಬೆ ಜಯಶ್ರೀ, ಸುಧಾ ರಘುನಾಥನ್, ಬಾಂಬೆ ಸಹೋದರಿಯರು, ಟಿ ಎಸ್ ಸತ್ಯವತಿ, ನಿತ್ಯಶ್ರೀ ಮಹಾದೇವನ್, ನಾಗಮಣಿ ಶ್ರೀನಾಥ್, ಸಂಗೀತಾ ಶಿವಕುಮಾರ್, ಟಿ ಎಂ ಕೃಷ್ಣ, ಸಂಜಯ್ ಸುಬ್ರಹ್ಮಣ್ಯಂ, ಮಲ್ಲಾಡಿ ಸಹೋದರರು, ಹೈದರಾಬಾದ್ ಸಹೋದರರು, ನೈವೇಲಿ ಸಂತಾನ ಗೋಪಾಲನ್, ಟಿ ಎನ್ ಕೃಷ್ಣನ್, ಟಿ ಎನ್ ಶೇಷಗೋಪಾಲನ್, ಟಿ ವಿ ಶಂಕರನಾರಾಯಣನ್, ಟಿ ವಿ ಗೋಪಾಲಕೃಷ್ಣನ್, ಎನ್ ರಾಜಮ್, ರೋನು ಮಜುಂದಾರ್, ಶುಭೇಂದ್ರ, ಅಮ್ಜದ್ ಅಲಿ ಖಾನ್ ಮುಂತಾದವರಲ್ಲಿ ಹೆಚ್ಚಿನವರು ಬಂದು ನಮ್ಮನ್ನು ಸಂಗೀತ ಸಾಗರದಲ್ಲಿ ತೇಲಿಸುತ್ತಾರೆ. ಸಂಗೀತ ಕಾರ್ಯಕ್ರಮಗಳು ಸಂಜೆ ೬-೩೦ರಿಂದ ೯-೩೦ರ ವರೆಗೆ ನಡೆಯುತ್ತವೆ. ಇಲ್ಲಿನ ಜನರ ಅಭಿರುಚಿಗೆ ತಕ್ಕಂತೆ ಹಿಂದುಸ್ಥಾನಿಗಿಂತ ಕರ್ನಾಟಕ ಶೈಲಿಯ ಸಂಗೀತವೇ ಜಾಸ್ತಿ.

ಸಂಜೆ ೫-೧೫ರಿಂದ ೬-೧೫ರ ವರೆಗೆ ಸಂಗೀತ ಪ್ರತಿಭಾಕಾಂಕ್ಷಿಗಳಿಂದ ಕಛೇರಿಗಳು ನಡೆಯುತ್ತವೆ. ಇದರಲ್ಲಿ ೩೦ ವರ್ಷಕ್ಕಿಂತ ಕೆಳಗಿನ ಅರಳುತ್ತಿರುವ ಪ್ರತಿಭೆಗಳು ಭಾಗವಹಿಸುತ್ತಾರೆ. ಇದರಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದವರನ್ನು ಉತ್ಸವದ ಕೊನೆಯಲ್ಲಿ ಪುರಸ್ಕರಿಸಲಾಗುತ್ತದೆ.

ಅಲ್ಲದೇ ಇತ್ತೀಚೆಗೆ ೪-೫ ವರ್ಷಗಳಿಂದ ಒಂದು ಒಳ್ಳೆಯ ಪರಿಪಾಠವನ್ನು ಆರಂಭಿಸಿದ್ದಾರೆ. ಅದೇನೆಂದರೆ ಸಂಗೀತ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರಿಗೆ ಎಸ್ ವಿ ನಾರಾಯಣಸ್ವಾಮಿ ಪ್ರಶಸ್ತಿಯನ್ನು ಕೊಡೋದು. ಹಿಂದೆ ಎಂ ಎಸ್ ಸುಬ್ಬುಲಕ್ಷ್ಮಿ, ಎಂ ಬಾಲಮುರಳಿ ಕೃಷ್ಣ, ಆರ್ ಆರ್ ಕೇಶವಮೂರ್ತಿ, ಆರ್ ಕೆ ಶ್ರೀಕಂಠನ್ ಇವರಿಗೆಲ್ಲಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಈ ಸಲ ಹಿಂದುಸ್ಥಾನಿ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ರವರನ್ನು ಆಯ್ಕೆ ಮಾಡಿದ್ದಾರಂತೆ.

ಸಂಗೀತದ ಜೊತೆಗೆ ಬೆಳಗ್ಗೆ ರಾಮಾಯಣ, ಮಹಾಭಾರತ, ಭಾಗವತದಂತಹ ಪುರಾಣಗಳ ಬಗ್ಗೆ ಉಪನ್ಯಾಸ-ಪಾರಾಯಣಗಳೂ ನಡೆಯುತ್ತವೆ.

ದಿವಂಗತ ಎಸ್ ವಿ ನಾರಾಯಣಸ್ವಾಮಿಯವರಿಂದ ೧೯೩೯ರಲ್ಲಿ ಆರಂಭವಾದ ಈ ಮಂಡಳಿ ಕಳೆದ ೭೦ ವರ್ಷಗಳಿಂದ ಸತತವಾಗಿ ಸಂಗೀತೋತ್ಸವಗಳನ್ನು ನಡೆಸಿಕೊಂಡು ಬಂದಿದೆ. ನಾನಂತೂ ೨೦೦೧ರಿಂದ ಪ್ರತಿ ವರ್ಷ ಹೋಗ್ತಾ ಇದ್ದೀನಿ. ಪ್ರತಿ ವರ್ಷ ೨೦ಕ್ಕೂ ಹೆಚ್ಚು ಕಛೇರಿಗಳನ್ನು ಕೇಳ್ತೀನಿ. ಈ ಸಲ ಎಪ್ರಿಲ್ ೩ರಂದು ಉತ್ಸವ ಆರಂಭವಾಗಲಿದೆ.

(ಕಛೇರಿ ಮಧ್ಯೆ ಎದ್ದು ಹೋಗುವುದು, ತನಿ ಆವರ್ತನ ಆರಂಭವಾದ ಕೂಡಲೆ ಮನೆಗೆ ಹೊರಡುವುದು, ಅಲ್ಲಿ ಕೂತು ಕಡ್ಲೆಪುರಿ ತಿನ್ನೋದು, ಜಂಗಮವಾಣಿಯಲ್ಲಿ ಮಾತಾಡೊದು ಎಲ್ಲಾ ಬೇಡ, ದಯವಿಟ್ಟು ಬೇಡ. ಇದರಿಂದ ಕಲಾವಿದರ ಏಕಾಗ್ರತೆಗೆ ಧಕ್ಕೆ ಬರುತ್ತೆ ಇಲ್ಲಾ ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಅಲ್ಲದೇ ಪಕ್ಕದಲ್ಲಿ ಕುಳಿತವರಿಗೆ ತೊಂದರೆ.)

ನೀವೂ ಸಂಗೀತಾಸಕ್ತರಾಗಿದ್ದರೆ ಕಾರ್ಯಕ್ರಮ ಪಟ್ಟಿ ನೋಡಿ ಬನ್ನಿ. ಸಂಗೀತದ ರಸದೌತಣವನ್ನು ಸವಿಯೋಣ.

3 comments:

  1. ಶಿವಾನಂದ,
    ಮಾಹಿತಿಗೆ ಬಹಳ ಧನ್ಯವಾದಗಳು.
    ನಾನು ಬಹಳ ಕಾತರದಿಂದ ಕಾಯುತ್ತಿದ್ದೆ. ಕಾರ್ಯಕ್ರಮ ಪಟ್ಟಿಯಲ್ಲಿ ಆರ್ ಕೆ ಪಿ ಮತ್ತು ವಿದ್ಯಾಭೂಷಣರ ಕಾರ್ಯಕ್ರಮ ಕಂಡೂ ಬರಲಿಲ್ಲ!

    ReplyDelete
  2. ಗುರು,
    ಈ ವರ್ಷ ಅವರಿಬ್ಬರ ಕಛೇರಿ ಇಲ್ಲಿ ಇಲ್ಲ ಅನ್ನಿಸುತ್ತೆ. ಬೇರೆ ಕಡೆ ನಡೆಯುವ ರಾಮನವಮಿ ಉತ್ಸವಗಳಲ್ಲಿ ಇರಬಹುದು. ದಿನಪತ್ರಿಕೆ ನೋಡಿ ತಿಳಿದುಕೊಳ್ಳಬೇಕು.

    ಕೆಲವು ಕಲಾವಿದರು ಲಭ್ಯವಿಲ್ಲದಿದ್ದರೆ ಬೇರೆ ಕಲಾವಿದರನ್ನು ಕರೆಸಿರಬಹುದು, ಗೊತ್ತಿಲ್ಲ. ಹಾಗೇ ಎಲ್ಲಾ ಕಲಾವಿದರನ್ನು ಕರೆಸಿದರೆ ಉತ್ಸವವನ್ನು ೩-೪ ತಿಂಗಳು ನಡೆಸಬೇಕಾಗಬಹುದು. ಅಷ್ಟು ಹೊತ್ತಿಗೆ ಮಳೆಗಾಲ ಶುರುವಾಗುತ್ತೆ :-)

    ReplyDelete
  3. ನಮಸ್ತೆ!,

    ಮಾಹಿತಿ ತುಂಬಾ ಉಪಯುಕ್ತ. ಇಂದೆಲ್ಲಾ ವಿದೇಶಿ "ರಾಕ್" ಸಂಗೀತ ಕೇಳೋ ಜನ ನಮ್ಮತನ ಮತ್ತು ಸಿಹಿ ಸಂಗೀತದ ಕಂಪು ಮರೆತೇ ಹೋಗಿದ್ದಾರೆ. ಆದರೂ ನಮ್ಮಲ್ಲಿ ಆ ಪ್ರತಿಭೆಗೆ ಪ್ರೋತ್ಸಾಹ ನೀಡೋ ಜನ ಇದ್ದಾರೆ.

    ಧನ್ಯವಾದಗಳೊಂದಿಗೆ ಉತ್ಸವಕ್ಕೆ ಶುಭ ಕೋರುತ್ತಾ,
    ಸತ್ಯ

    ReplyDelete