22 March 2009

ಸಂಚಾರ ದಟ್ಟಣೆಗೆ ಏನು ಪರಿಹಾರ ?

ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಸಂಖ್ಯೆಗಳಿಂದಾಗಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ವಾಯು ಹಾಗೂ ಶಬ್ದ ಮಲಿನಗೊಳ್ಳುತ್ತಿದೆ. ಅಪಘಾತಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಏನು ಪರಿಹಾರ ? ರಸ್ತೆ ಅಗಲೀಕರಣ ಹಾಗೂ ಮೇಲು ಸೇತುವೆಗಳು ಸಮಸ್ಯೆಯನ್ನು ಪರಿಹರಿಸೋದಿಲ್ಲ. ೪-೫ ತಿಂಗಳಲ್ಲಿ ವಾಹನಗಳ ಸಂಖ್ಯೆ ಅಷ್ಟೆ ಏರುತ್ತದೆ. ಹಾಗಿದ್ದರೆ ಏನು ಮಾಡಬಹುದು ?

ನಾನು ಹೀಗೇ ಕುಳಿತು ಯೋಚನೆ ಮಾಡುತ್ತಿರಬೇಕಾದರೆ, ಕೆಲವು ವಿಚಾರಗಳು ನನ್ನ ಮನಸ್ಸಿಗೆ ತೋಚಿದವು.

ಹೊಸ ಉದ್ಯಮ/ಕಂಪನಿ ಯಾವುದೇ ಇರಲಿ ಬೆಂಗಳೂರು ಬಿಟ್ಟು ಮೈಸೂರು, ಮಂಗಳೂರು, ದಾವಣೆಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ತುಮಕೂರು ಬೇರೆ ಬೇರೆ ಕಡೆ ಸ್ಥಾಪನೆಯಾಗಲಿ. ಅಲ್ಲಿ ಕೂಡ ರಸ್ತೆ, ನೀರು, ವಿದ್ಯುತ್ ಹಾಗೂ ಇನ್ನಿತರ ಸೌಕರ್ಯಗಳು ಅಭಿವೃದ್ಧಿಯಾಗಲಿ. ಆವಾಗ ಜನರು/ವಾಹನಗಳು ಬೇರೆ ಬೇರೆ ನಗರಗಳಲ್ಲಿ ಹಂಚಿ ಹೋಗುತ್ತಾರೆ. ಏರುತ್ತಿರುವ ಮನೆ/ಸೈಟ್ ಬೆಲೆಗಳಿಗೂ ಸ್ವಲ್ಪ ಕಡಿವಾಣ ಬೀಳಬಹುದು. ಈ ಕೆಲಸ ಮುಂಚೆನೇ ಆಗಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತು ಇದನ್ನು ಜಾರಿಗೊಳಿಸಬಹುದು.

ಬೆಂಗಳೂರು ನಗರದಲ್ಲಿ ಈವಾಗಲೇ ಜನ/ವಾಹನ ದಟ್ಟಣೆ ಇರುವ ಬಡಾವಣೆಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಹೊಸ ಕಂಪನಿಯ ಬಹುಮಹಡಿ ಕಟ್ಟಡಗಳು, ವಸತಿ ಸಮುಚ್ಚಯಗಳನ್ನು ಕಟ್ಟಲು ಅನುಮತಿ ಕೊಡಬಾರದು. ಬೆಂಗಳೂರಿನ ಹೊರವಲಯಗಳಲ್ಲಿ ಇಂತಹ ಕಟ್ಟಡಗಳನ್ನು ಕಟ್ಟಲಿ. ನಗರ ಅಗಲವಾಗಿ ಬೆಳೆಯಲಿ, ಎತ್ತರಕ್ಕೆ ಬೇಡ.

ಸುಭಾಶ್ ನಗರ, ಶಿವಾಜಿನಗರ, ಶಾಂತಿನಗರ, ಕೃ. ರಾ. ಮಾರುಕಟ್ಟೆ, ಮೈಸೂರು ರಸ್ತೆಗಳಲ್ಲಿ ಈಗ ಇರುವಂತೆ ಬಸ್ ನಿಲ್ದಾಣಗಳನ್ನು ಇನ್ನೂ ಹೆಚ್ಚಿನ ಕಡೆಗಳಲ್ಲಿ ಕಟ್ಟಲಿ. ಅಲ್ಲಿಂದ ನಗರದ ಎಲ್ಲಾ ಭಾಗಗಳಿಗೂ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಗೂ ನೇರ ಬಸ್ ಸೌಲಭ್ಯ ಒದಗಿಸಲಿ.

೩-೪ ಜನ ಒಂದೇ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಕಾರ್ ಪೂಲಿಂಗನ್ನು (Car pooling ) ಸಮರ್ಥವಾಗಿ ಬಳಸಲಿ. ೪ ಜನ, ೪ ಕಾರಿನಲ್ಲಿ ಹೋಗೋದು ಬಿಟ್ಟು, ಒಂದೇ ಕಾರಿನಲ್ಲಿ ಕಚೇರಿಗೆ ಹೋಗಿ ಬರಬಹುದು. ಒಂದೊಂದು ದಿನ ಒಬ್ಬೊಬ್ಬರ ಕಾರ್ ಉಪಯೋಗಿಸಬಹುದು. ಸಂಚಾರ ದಟ್ಟಣೆ ಕಡಿಮೆಯಾಗುತ್ತೆ, ಇಂಧನ ಉಳಿತಾಯವಾಗುತ್ತೆ, ಮಾಲಿನ್ಯದ ಪ್ರಮಾಣವೂ ಕಡಿಮೆಯಾಗುತ್ತೆ. ಹಾಗೇ ಒಬ್ಬರು ಕಾರ್ ಚಲಾಯಿಸುತ್ತಿದ್ದರೆ, ಉಳಿದವರು ಸಂಗೀತ ಕೇಳುವುದು, ಓದುವುದು ಹೀಗೆ ಬೇರೆ ಕೆಲಸ ಮಾಡಿಕೊಂಡು ಸಮಯದ ಸದುಪಯೋಗ ಮಾಡಿಕೊಳ್ಳಬಹುದು.

ಹೆಚ್ಚುತ್ತಿರುವ ವಾಹನಗಳಿಂದಾಗಿ ಬೆಂಗಳೂರು ಇನ್ನೊಂದು ಮುಂಬೈ ಆಗದಿರಲಿ. ನಮ್ಮ ಬೆಂಗಳೂರಿನಲ್ಲಿ ಸಂಚಾರದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಅಪಘಾತಗಳು ಕಡಿಮೆಯಾಗಲಿ ಎಂಬುದೇ ನನ್ನ ಆಶಯ. ರೋಗ ಬರೋಕೆ ಮುಂಚೆ ಅದು ಬಾರದಂತೆ ತಡೆಗಟ್ಟೋದು ಸುಲಭ ಹಾಗೂ ಒಳ್ಳೆಯದಲ್ವೇ ?

14 March 2009

ಕೃಷಿಕ ಬಡವನಾಗೇ ಇರಬೇಕೇ ?

"ಹಳ್ಳಿಗಳಲ್ಲಿ ಕೂಲಿ ಕೆಲಸದವರ ಕೊರತೆ ಇದೆ, ಈಗಿನ ಜನಾಂಗದ ಹಳ್ಳಿಯ ಜನ ನಗರಕ್ಕೆ ಹೋಗಿ ಕೆಲಸಕ್ಕೆ ಸೇರ್ಕೋತಾರೆ, ಹಳ್ಳಿಗಳಲ್ಲಿ ಕೃಷಿ ಮಾಡೋರು ಯಾರೂ ಇಲ್ಲ, ತೋಟಗಳು ಒಣಗಿ ಹೋಗಿವೆ, ಗದ್ದೆಗಳು ಖಾಲಿ ಬಿದ್ದಿವೆ, ಅಲ್ಲಿರುವ ಹೆತ್ತವರಿಗೆ ಒಂಟಿತನ ಕಾಡುತ್ತಿದೆ" ..... ಹೀಗೆಲ್ಲಾ ನಾವು ಕೇಳುತ್ತೇವೆ, ಪತ್ರಿಕೆಗಳಲ್ಲಿ ಓದುತ್ತೇವೆ.

ಕಾರಣ:
ಹಳ್ಳಿಯಲ್ಲಿ ಜಮೀನು ಇದ್ರೂನೂ ಕೂಲಿ ಕೆಲಸದವರು ಸಿಗಲ್ಲ. ಬರೇ ಮನೆಯವರೇ ಸೇರಿ ಭತ್ತದ ವ್ಯವಸಾಯ ಮಾಡೋಕೆ ಸಾಧ್ಯವೇ ಇಲ್ಲ. ಬೆಳೆ ಬೆಳೆದ್ರೂನೂ ಹೊಟ್ಟೆ ತುಂಬಿಸ್ಕೋಬಹುದು. ಏನೂ ಉಳಿಯಲ್ಲ. ಹೀಗಿರೋವಾಗ ಕೃಷಿಗೆ ಬೇಕಾದ ಆಧುನಿಕ ಪರಿಕರಗಳನ್ನು ಕೊಳ್ಳೋದು ಹೇಗೆ ? ಪೇಟೆಯವರ ಹಾಗೆ ಮನೆ, ಸೌಕರ್ಯಗಳನ್ನು ಮಾಡ್ಕೊಳ್ಳೋದು ಹೇಗೆ ? ಅಕ್ಕಿ ಬೆಲೆ ಕೆ. ಜಿ. ಗೆ ೩೫ ರೂ. ಆಗಿದೆ. ಆದ್ರೆ ಅದರಲ್ಲಿ ಎಷ್ಟು ಭಾಗ ಬೆಳೆದ ರೈತನಿಗೆ ಸಿಗುತ್ತೆ ?

ಹಳ್ಳಿಗರು/ಕೃಷಿಕರು ಸಿನಿಮಾದಲ್ಲಿ ಅಥವಾ ಕಾರ್ಯ ನಿಮಿತ್ತ ನಗರಕ್ಕೆ ಹೋದಾಗ ನಗರವಾಸಿಗಳನ್ನೂ, ನಗರದ ವ್ಯವಸ್ಥೆಗಳನ್ನೂ, ಸೌಕರ್ಯಗಳನ್ನೂ ನೋಡುತ್ತಾರೆ. ನಗರದ ಜನರು ಕೋಟು-ಬೂಟು ಹಾಕಿ ಕಾರಲ್ಲಿ ಕೂತು ಕಚೇರಿಗೆ ಹೋಗೋದನ್ನು ನೋಡಿ ಆಕರ್ಷಿತರಾಗುತ್ತಾರೆ. ಅಥವಾ ತಮ್ಮ ಊರಿನ ಕೆಲವರು ಓದಿ, ನಗರಕ್ಕೆ/ವಿದೇಶಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಂಡಿರುವವರನ್ನೂ ನೋಡುತ್ತಾರೆ. "ನಮ್ಮಿಂದ ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳನ್ನು ಚೆನ್ನಾಗಿ ಓದಿಸ್ತೀವಿ. ನಮ್ಮ ಮಕ್ಕಳೂ ಅವರ ಥರ ನಗರಕ್ಕೆ ಹೋಗಿ ದೊಡ್ಡ ಆಫೀಸರ್ ಆಗ್ಬೇಕು. ನಮ್ಮ ಥರ ಬಿಸಿಲಲ್ಲಿ ಗದ್ದೆಯಲ್ಲಿ/ತೋಟದಲ್ಲಿ ಕೆಲಸ ಮಾಡೋದು ಬೇಡ." ಅಂತ ಆಸೆ ಪಟ್ಕೋತಾರೆ. ಹಾಗೇ ಮಕ್ಕಳೂ ಓದಿದ ನಂತರ ನಗರಕ್ಕೆ ಹೋಗಿ ಕೆಲಸಕ್ಕೆ ಸೇರ್ಕೋತಾರೆ. ಆಮೇಲೆ ಮಕ್ಕಳಿಗೂ ತಮ್ಮ ಹೆತ್ತವರು ತಮ್ಮ ಜೊತೆ ಇರಬೇಕು, ಹಳ್ಳಿಯಲ್ಲಿ ಅವರನ್ನು ನೋಡ್ಕೊಳ್ಳೋರು ಇಲ್ಲ, ಅವರು ಬಿಸಿಲಲ್ಲಿ ಕಷ್ಟ ಪಡೋದು ಬೇಡ ಅಂತ ಅನ್ನಿಸುತ್ತೆ. ಅಲ್ಲಿನ ಜಮೀನು ಮಾರಿ ಅವರನ್ನು ನಗರಕ್ಕೆ ಕರೆಸಿಕೊಳ್ತಾರೆ.

ನನ್ನ ಅನಿಸಿಕೆ ಪ್ರಕಾರ ಇದು ತಪ್ಪಲ್ಲ. ಆಸೆ ಎಲ್ಲರಿಗೂ ಇರುತ್ತೆ. ಕನಸು ಎಲ್ಲರೂ ಕಾಣುತ್ತಾರೆ. ಹಣ, ಆಸ್ತಿ, ಅಂತಸ್ತು, ಮನೆ, ಕಾರು ಎಲ್ಲರಿಗೂ ಬೇಕು. ನಗರವಾಸಿಗಳು/ಶ್ರೀಮಂತರು ನಗರದಲ್ಲೇ ಇರಬೇಕು, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು, ಅವರ ವಂಶಸ್ಥರೆಲ್ಲಾ ನಗರದಲ್ಲೇ ಆಫೀಸ್ ಕೆಲಸಕ್ಕೇ ಹೋಗಬೇಕು, ಕಾರಲ್ಲಿ ಕೂತು ಭುರ್ರ್ ಅಂತ ಓಡಾಡಬೇಕು, ಆದರೆ ಕೃಷಿಕರು ಹಳ್ಳಿಯಲ್ಲೇ ಇರಬೇಕು, ಬಡವರಾಗೇ ಇರಬೇಕು, ಬಿಸಿಲಲ್ಲಿ ಬೆವರು ಸುರಿಸಿ ಕೆಲಸ ಮಾಡಬೇಕು ಮತ್ತು ನಗರವಾಸಿಗಳ ಹೊಟ್ಟೆ ತುಂಬಿಸಬೇಕು. ಶ್ರೀಮಂತರು ಇನ್ನೂ ಶ್ರೀಮಂತರಾಗಬೇಕು, ಕೃಷಿಕ ಮಾತ್ರ ಬಡವನಾಗೇ ಇರಬೇಕು. ಇದು ಒಪ್ಪ ತಕ್ಕ ಸಿದ್ಧಾಂತವೇ ? "ರೈತ ದೇಶದ ಬೆನ್ನೆಲುಬು" ಅಂತಾರೆ. ಆದ್ರೆ ಅವನು ಯಾವಾಗ್ಲೂ ಬೆನ್ನೆಲುಬಾಗಿದ್ದು ಕಷ್ಟ ಅನುಭವಿಸ್ತಾ ಇರಬೇಕೇ ? ಕಣ್ಣು, ಕಿವಿ, ಮೂಗು, ನಾಲಗೆಯಾಗಿ ಸುಖ ಪಡೋದು ಬೇಡವೆ ?

ಪರಿಹಾರ ?
ಸರಕಾರ ಒಂದು ಕಾನೂನು ಮಾಡಿ, "ನಗರದವರು ಎಲ್ಲರೂ ಆವರ್ತನೆಯಲ್ಲಿ(Rotation Basis) ಹಳ್ಳಿಗೆ ಹೋಗಿ ಇಂತಿಷ್ಟು ವರ್ಷ ವ್ಯವಸಾಯ ಮಾಡಬೇಕು" ಅಂದ್ರೆ ಹೇಗೆ ? ಇಂತಹ ಕಾನೂನು ಮಾಡಿದ್ರೂ ಅದನ್ನು ಜಾರಿಗೆ ತರೋದು ಕಷ್ಟ, ನಗರದವರು ಒಪ್ಪಲ್ಲ.

ಅಥವಾ ನಗರದವರು ಸ್ವಇಚ್ಛೆಯಿಂದ ಹಳ್ಳಿಗಳಿಗೆ ಹೋಗಿ ಜಮೀನು ತಗೊಂಡು ವ್ಯವಸಾಯ ಮಾಡಬೇಕು. ಕೆಲವರು ಜಮೀನು ತಗೋತಾರೆ, ಆದ್ರೆ ತಾವಾಗಿ ಅಲ್ಲಿ ಹೊಲದಲ್ಲಿ ಕೆಲಸ ಮಾಡಲ್ಲ. ಕೆಲಸಕ್ಕೆ ಕೂಲಿಗಳನ್ನು ಇಟ್ಕೋತಾರೆ. ತಾವೇ ಕೆಲಸ ಮಾಡಿದ್ರೆ ಕೃಷಿಕನ ಕಷ್ಟ ಏನು ಅಂತ ಗೊತ್ತಾಗುತ್ತೆ.

ಇಲ್ಲಾ ಕೆ.ಜಿ. ಅಕ್ಕಿಗೆ ೩೦೦ ರೂ., ಬೇಳೆಗೆ ೫೦೦ ರೂ., ಟೊಮೆಟೋಗೆ ೧೦೦ ರೂ. ಆಗಲಿ. ಆವಾಗ ಎಲ್ಲರೂ ಹಳ್ಳಿ ಕಡೆ ಮುಖ ಮಾಡ್ತಾರೆ. ಕೋರಮಂಗಲ/ಇಂದಿರಾನಗರದ ಸೈಟ್ ಬೆಲೆ ಹಳ್ಳಿಯ ಜಮೀನಿಗೆ ಬರುತ್ತೆ. ಹಳ್ಳಿಗಳಲ್ಲಿ ಬೆಳೆ ಬೆಳೆಸೋಕೆ, ಮಾರೋಕೆ ಹೊಸ ಕಂಪೆನಿಗಳು ಉದಯಿಸಬಹುದು, ಇಳುವರಿ ಹೆಚ್ಚಿಸಲು ಸಂಶೋಧನೆಗಳಾಗಬಹುದು, ಹೊಸ ಹೊಸ ಪೇಟೆಂಟ್ ಗಳು ಆಗಬಹುದು. ಹೊಸ ಹೊಸ ಯಂತ್ರೋಪಕರಣಗಳು ಬರಬಹುದು. ಕ್ರೆಡಿಟ್ ಕಾರ್ಡ್ ಏಜಂಟ್ ಗಳು ರೈತರ ಬಾಲ ಹಿಡಿಯಬಹುದು. ಒಟ್ಟಿನಲ್ಲಿ ಕ್ರಾಂತಿಯಾಗಬಹುದು.

ಏನಂತೀರಿ ?

ನಿಮ್ಮಲ್ಲಿ ಇನ್ನು ಏನಾದರೂ ಪರಿಹಾರ ಇದೆಯಾ ? ಬರೆದು ಕಳುಹಿಸಿ.


23 February 2009

ಹೆಸರಲ್ಲೇನಿದೆ ?

ಒಂದು ನಗೆ ಬರಹ ..........

ಹಿಂದೆ ಮಕ್ಕಳಿಗೆ ಹೆಸರಿಡುವಾಗ ದೇವರ ಹೆಸರು ಇಡುತ್ತಿದ್ದರು. ಯಾಕಂದ್ರೆ ಮಕ್ಕಳು ದೇವರ ಥರಾ ಒಳ್ಳೆಯವರಾಗಲಿ ಎಂದು ಅಥವಾ ಮಕ್ಕಳನ್ನು ಕರೆಯುವ ಸಲುವಾಗಿ ದೇವರನಾಮ ತಮ್ಮ ಬಾಯಲ್ಲಿ ಬರುತ್ತೆ ಅಂತ. (ಹಿಂದೆ ಯಮನ ದೂತರು ಬಂದು ಅಜಾಮಿಳನ ಕೊರಳಿಗೆ ಯಮಪಾಶ ಬಿಗಿದಾಗ, "ನಾರಾಯಣ" ಎಂಬ ತನ್ನ ಮಗನನ್ನು ಕರೆದಿದ್ದರಿಂದ ಅವನ ಪ್ರಾಣ ಉಳಿಯಿತಂತೆ.) ಕ್ರಮೇಣ ಈ ಅಭ್ಯಾಸ ಬದಲಾಯಿತು. ಪ್ರಸಿದ್ಧ ವ್ಯಕ್ತಿಗಳ, ಸಿನಿಮಾ ನಟ/ನಟಿಯರ, ಆಟಗಾರರ ಹೆಸರು ಇಡಲು ಆರಂಭಿಸಿದರು. ಈಗಿನವರು ಇನ್ನೂ ಮುಂದುವರಿದಿದ್ದಾರೆ. ಈಗ ಇರುವ ಹೆಸರುಗಳ ಬಗ್ಗೆ "ಅದೇನದು ಹಳೇ ಹೆಸರು ? ಓಬೀರಾಯನ ಕಾಲದ್ದು !!" ಎಂದು ಮೂಗು ಮುರಿಯುತ್ತಾರೆ. ಯಾರೂ ಇಡದ, ಎಲ್ಲಿಯೂ ಇಲ್ಲದ ಹೊಸ ಹೆಸರಿನ ತಲಾಶೆಯಲ್ಲಿದ್ದಾರೆ ಜನ. ಕೆಲವರು ಯಾವುದೋ ಪಾಶ್ಚಾತ್ಯರ ಹೆಸರು ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ಹಳೆಯ ಹೆಸರಿನ ಕೆಲವು ಅಕ್ಷರಗಳನ್ನು ನುಂಗಿ, ಸ್ವರಗಳನ್ನು ಸ್ಥಾನಪಲ್ಲಟಗೊಳಿಸಿ, ಎರಡು ಅರ್ಧ-ಅರ್ಧ ಹೆಸರುಗಳನ್ನು ಸೇರಿಸಿ ಹೊಸ "ಶಬ್ದ"ದ ಸಂಶೋಧನೆ ಮಾಡುತ್ತಾರೆ. ಆ "ಶಬ್ದ"ವನ್ನೇ ಮಗುವಿಗೆ "ಹೆಸರು" ಅಂತ ಇಡುತ್ತಾರೆ.

ಹಿಂದಿನ ಹೆಸರುಗಳಿಗೆ ಒಳ್ಳೆಯ ಅರ್ಥಗಳಿದ್ದವು. ನಾಮ ಅಂಕಿತವಾದರೂ ಅನ್ವರ್ಥವಾಗಲಿ ಎಂದು ಹೆತ್ತವರು ಹಾರೈಸುತ್ತಿದ್ದರು. ಆದರೆ ಈಗಿನವು ಇಟ್ಟವರಿಗೇ ಪ್ರೀತಿ. ಕೆಲವು ಸಂಶೋಧಿತ ಹೆಸರುಗಳು "ಒಳ್ಳೆಯ" ಋಣಾತ್ಮಕ ಅರ್ಥ ಹೊಂದಿವೆ. ಇನ್ನು ಕೆಲವಕ್ಕೆ ಭಾರತದ ಯಾವುದೇ ಭಾಷೆಯ ಅರ್ಥಕೋಶ ತೆರೆದು ನೋಡಿದರೂ ಅರ್ಥ ಸಿಗಲಿಕ್ಕಿಲ್ಲ. ಈ ಪದಗಳಿಗೆ ಹೊಸ ಅರ್ಥ ಕೊಟ್ಟು ಅರ್ಥಕೋಶಕ್ಕೆ ಸೇರಿಸಬೇಕು.

"ಬೆಳದಿಂಗಳ ಬಾಲೆ" ಕನ್ನಡ ಚಲನಚಿತ್ರದಲ್ಲಿ ನಾಯಕನ ಹೆಸರು "ರೇವಂತ್". ನಾಯಕಿ ಇದರ ಅರ್ಥದ ಬಗ್ಗೆ ಕೇಳಿದಾಗ ತುಂಬಾ ಕಷ್ಟಪಟ್ಟು ಕಂಡುಹಿಡಿಯುತ್ತಾನೆ - ರೇವಂತ್ ಅಂದ್ರೆ "ಸಮುದ್ರದ ದಂಡೆಯಲ್ಲಿ ಕುದುರೆ ತೊಳೆಯುವವ" ಎಂದು.

ಕೆಲವರು ಈಗಿರುವ ಹೆಸರು ದುರಾದೃಷ್ಟಕರ ಅಂತ, ಸಂಖ್ಯಾಶಾಸ್ತ್ರಜ್ಞರ ಜೇಬು ತುಂಬಿಸಿ ಹೆಸರುಗಳನ್ನು ಬದಲಾಯಿಸುತ್ತಾರೆ. ಹೆಸರಿನಲ್ಲಿ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸುತ್ತಾರೆ ಅಥವಾ ಬದಲಾಯಿಸುತ್ತಾರೆ. ಹೀಗೆ ಹೆಸರುಗಳನ್ನು ಬದಲಾಯಿಸುವ ಹಿಂದಿ ಚಲನಚಿತ್ರ ನಟ/ನಟಿಯರ ಬಗ್ಗೆ ಕಳೆದ ವರ್ಷ ಟಿವಿಯಲ್ಲಿ ಪ್ರಸಾರವಾದ ಒಂದು ಕಾರ್ಯಕ್ರಮವನ್ನು ನಾನು ನೋಡಿದ್ದೆ.

ತಪ್ಪು ಅಂತ ಹೇಳ್ತಾ ಇಲ್ಲ, ಆದ್ರೆ ನಾನು ಕೇಳಿದ ಕೆಲವು ಹೆಸರುಗಳು ಹೀಗಿವೆ:

ಪ್ರಮಾದ್ : ಅಂದರೆ "ತಪ್ಪು" (ಬಹುಶಃ ಇದು ಪ್ರಮೋದ್ ನ ರೂಪಾಂತರ). ಈತ ಯಾವಾಗ್ಲೂ ತಪ್ಪು ಮಾಡ್ತಿರ್ತಾನೆ ಅಂತನಾ ? ಇನ್ನೇನೋ ಗೊತ್ತಿಲ್ಲ.

ಅಂಜೇಶ್ : ಇದು ಅಂಜನಾ+ರಾಜೇಶ್ ಇರಬಹುದು. ತುಂಬಾ ಧೈರ್ಯ ಇರುವವನಿಗೆ ಧೀರಜ್ ಅಂತಾರೆ. ಈತ ತುಂಬಾ ಹೆದರು ಪುಕ್ಕಲ.

ಮಗಧ್ : ಹಿಂದೆ ಈ ಹೆಸರಿನ ದೇಶ ಇತ್ತಂತೆ. ಪರ್ವಾಗಿಲ್ಲ ಭರತ್, ಭಾರತಿ ಎಂಬ ಹೆಸರುಗಳಿವೆ.

ಚಾರ್ಮೇಶ್ : ಒಂದು ಕಾರ್ ಮೇಲೆ ಈ ಹೆಸರು ನೋಡಿದೆ. ಏನು ಅಂತ ಅರ್ಥ ಆಗ್ಲಿಲ್ಲ.

ಇನ್ನೂ ತುಂಬಾ ಕೇಳಿದ್ದೀನಿ. ನೆನಪಿಗೆ ಬರುತ್ತಿಲ್ಲ. ನಿಮಗೆ ಇಂಥಾ ಹೆಸರುಗಳು ಗೊತ್ತಿದ್ದರೆ ಕಳಿಸಿ.

ನಾನೂ ಕೆಲವೊಂದು ಹೊಸ ಹೆಸರುಗಳನ್ನು ಸಂಶೋಧಿಸಬಲ್ಲೆ....
ಕರ್ಕೇಶ್, ಪೋಂಕ್ರೇಶ್, ಅಂತೇಶ್, ರಮಿತಾಭ್, ಕಾಮಂತ್, ಚಿರಂತ್, ಸುವಂತ್, ಅಜಿತೇಶ್, ಅಜಿಷೇಕ್, ಅನುಜಿತ್, ಅನುಚಿತ್, ಕಜಯ್, ಬೃಜಯ್, ಬಜ್ಜಯ್, ಕೃತಿಕ್, ತಿಕ್ಕೇಶ್, ತಿಕ್ಲೇಶ್, ಮಟಾಶ್ (?), ಮಾಗೇಶ್, ಗಣಿಕಾಂತ್, ಗಣಿವಂತ್, ಪ್ರೀತಿಕಾ, ಕವಿಕಾ, ಜತಿಕಾ, ಮತ್ತಿಖಾ, ಭೋಂಪ್ಳೊ, ಮಿಲಿನಿ, ಲಾಲಿನಿ, ಕಾಳಿನಿ, ಕಾಳೇಂದ್ರಿ ....... ಹೀಗೆ.

ಚೆನ್ನಾಗಿದೆ ಅಂತ ಅನಿಸಿದ್ರೆ ಹೆಕ್ಕಿಕೊಳ್ಳಿ.

ಆದ್ರೂ ............. ಹೆಸರಲ್ಲೇನಿದೆ ? ಅಲ್ವೇ ?

03 February 2009

ಇಹ ಲೋಕ ಯಾತ್ರೆ ಮುಗಿಸಿದ ಯಕ್ಷರಂಗದ ಸಾರ್ವಭೌಮ ಕೆರೆಮನೆ ಶಂಭುಹೆಗಡೆ

ಕೆರೆಮನೆ ಶಂಭು ಹೆಗಡೆ

ಬಡಗುತಿಟ್ಟಿನ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಶಂಭು ಹೆಗಡೆ ಇನ್ನಿಲ್ಲ. ತಂದೆ ಶಿವರಾಮ ಹೆಗಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಇವರು ಯಕ್ಷಗಾನದಲ್ಲಿ ಅಪರಿಮಿತವಾದುದನ್ನು ಸಾಧಿಸಿ ಮೇರುಶಿಖರವನ್ನೇರಿದರು. ಇವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಯಾವುದೇ ಸಾಧಕರು ತಮ್ಮ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗಲೇ ಕೊನೆಯುಸಿರೆಳೆಯಲು ಇಚ್ಛಿಸುತ್ತಾರೆ. ಈ ವಿಷಯದಲ್ಲಿ ಶಂಭು ಹೆಗಡೆಯವರು ಭಾಗ್ಯಶಾಲಿಗಳು. ಯಾವುದೋ ಒಂದು ಸರಕಾರಿ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿ, ೨೦-೩೦ ವರ್ಷ ಮನೆಯಲ್ಲಿ ದಿನವೆಣಿಸುತ್ತಿರುವ ಯಾರಾದರೂ ಸತ್ತರೆ, "ಇವರ ಮರಣದಿಂದ, ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟ !!! " ಎನ್ನುತ್ತಾರೆ. ಆದರೆ ಕೊನೆಯವರೆಗೂ ಕಾರ್ಯಪ್ರವೃತ್ತರಾಗಿದ್ದ ಹೆಗಡೆಯವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ. ಇದ್ದಿದ್ದರೆ ಇನ್ನಷ್ಟು ಸಾಧಿಸುತ್ತಿದ್ದರು. ಇವರ ಮಕ್ಕಳು, ಮೊಮ್ಮಕ್ಕಳ ಮೇಲೆ ಕೆರೆಮನೆ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇದೆ.


ಈ ಹಿರಿಯರ ಆತ್ಮಕ್ಕೆ ಇಡಗುಂಜಿ ಮಹಾಗಣಪತಿ ಶಾಂತಿಯನ್ನು ದೊರಕಿಸಿ ಕೊಡಲಿ.



ಹೆಚ್ಚಿನ ಮಾಹಿತಿಗಾಗಿ ಓದಿ:
ಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ

ಕವಿದುಬಿದ್ದರು ಶಂಭುಹೆಗಡೆ ಹರಿಯ ಚರಣದಲಿ

Keremane Shambhu Hegde



02 February 2009

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?
ಆಥವಾ ಕೇವಲ ಭಾರತದ ಬಡತನ ಹಾಗೂ ಕೊಳೆಗೇರಿಗಳನ್ನು ತೋರಿಸಿ ವಿದೇಶದ ನಿರ್ದೇಶಕ/ನಿರ್ಮಾಪಕರು ದುಡ್ಡು ಮಾಡುತ್ತಿದ್ದಾರೆಯೇ ? ಅಮೇರಿಕಾದಲ್ಲಿ ಬಡವರಿಲ್ಲವೇ ? ಕೊಳೆಗೇರಿಗಳಿಲ್ಲವೇ ? ಭ್ರಷ್ಟಾಚಾರವಿಲ್ಲವೇ ? ನಿರ್ಜನ ಪ್ರದೇಶದಲ್ಲಿ ಹೋಗುತ್ತಿರುವವರನ್ನು ನಿಲ್ಲಿಸಿ, ಗನ್ ತೋರಿಸಿ ದುಡ್ಡು ಕೀಳುವವರಿಲ್ಲವೇ ? ದುಡ್ಡು ಕೊಡಲು ನಿರಾಕರಿಸಿದಾಗ ಕೊಲ್ಲುವುದಿಲ್ಲವೇ ? ಕೆಲಸಕ್ಕೆ ಅಥವಾ ಉನ್ನತ ವ್ಯಾಸಂಗಕ್ಕೆಂದು ಭಾರತದಿಂದ ಅಲ್ಲಿಗೆ ಹೋದವರು ಮೃತರಾಗಿಲ್ಲವೇ ? ಆದರೆ ನಾನು ನೋಡಿರುವ ಇಂಗ್ಲಿಷ್ ಚಿತ್ರಗಳಲ್ಲಿ ಕೇವಲ ಐಷಾರಾಮಿ ಮನೆ/ಆಫೀಸು/ಕಟ್ಟಡ/ವಿಮಾನ/ಹಡಗುಗಳನ್ನೇ ತೋರಿಸಿದ್ದಾರೆ. ವಿದೇಶೀಯರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಒಂದೆರಡು ಪ್ರಶಸ್ತಿಗಳು ಬಂದಾಗ ಇಲ್ಲಿನ ಕೆಲ ನಟರು ಕೊಂಬು ಬಂದವರ ಥರ ಏಕೆ ಆಡುತ್ತಾರೆ ? ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಈ ಚಿತ್ರ ಮಾಡಿದ್ದರೆ ಇಲ್ಲಿ ಹಾಗೂ ವಿದೇಶಗಳಲ್ಲಿ ಇಷ್ಟು ಸುದ್ದಿಯಾಗುತಿತ್ತೆ ? ಇಲ್ಲಿನ ೧-೨ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದೇ ವಾರಕ್ಕೆ ನಾಪತ್ತೆಯಾಗುತಿತ್ತು.

ವೆಬ್ ದುನಿಯಾದಲ್ಲಿ ಬಂದ ಬರಹ

ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ಬರಹ

ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ

ಇದು ಯಾವುದಾದರೂ ಭಾರತೀಯ ಭಾಷೆಯಲ್ಲಿ ಮಾಡಿದ್ದರೆ ಅಥವಾ ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಇಂಗ್ಲಿಷ್ ನಲ್ಲಿ ಮಾಡಿದ್ದರೆ Oscar ಬರುತ್ತಿತ್ತೇ ? ನಿಮ್ಮ ಅನಿಸಿಕೆ ಹೇಳಿ.