22 May 2009

New Blog for Photography

Many people like the colors & beauty of the nature. And I am not an exception. Obviously I am interested in capturing them in my camera. I make some time free for photography & upload some photos on http://colorshots.blogspot.com/

Please visit in your free time & share your opinions/suggestions.

(Click on titles under ‘Blog Archive’ on right side to see individual posts. Click on photos to see a full size photo in detail)

Don’t forget to leave your comments.

06 May 2009

ಗೀತೆಯ ಸಾರ

ದ್ವಾಪರಾಯುಗದಲ್ಲಿ ಕುರುಕ್ಷೇತ್ರದಲ್ಲಿ ಅರ್ಜುನನು ಯುದ್ಧ ಬೇಡವೆಂದು ಶಸ್ತ್ರ ತ್ಯಾಗ ಮಾಡಿ ಕುಳಿತಾಗ ಶ್ರೀಕೃಷ್ಣನು ಅವನಿಗೆ ಭಗವದ್ಗೀತೆ ಉಪದೇಶ ಮಾಡುತ್ತಾನೆ. ಸಹಸ್ರಾರು ವರ್ಷಗಳ ಹಿಂದೆ ಮಾಡಿದ ಉಪದೇಶದ ಸಾರ ಇಂದಿಗೂ ಪ್ರಸ್ತುತ. ಏನನ್ನಾದರೂ ಕಳೆದು ಕೊಂಡಾಗ, ಸೋತು ಕುಳಿತಾಗ, ಚಿಂತೆ ತಲೆಯನ್ನು ಸುಡುತ್ತಿರುವಾಗ, ಜೀವನದಲ್ಲಿ ಜಿಗುಪ್ಸೆ ಬಂದಾಗ ಇಂತಹ ಉಪದೇಶದ ನಾಲ್ಕು ಮಾತುಗಳನ್ನು ಕೇಳಿದಾಗ ಮನಸ್ಸಿಗೆ ಹಿತವಾಗುತ್ತದೆ, ಉತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಮುನ್ನುಗ್ಗಲು, ಹೊಸದನ್ನು ಕಲಿಯಲು-ಮಾಡಲು ಹೊಸ ಹುರುಪನ್ನು ತರುತ್ತದೆ. ಈಗಿನ ಯಾವುದೇ ಆಂಗ್ಲ ಪುಸ್ತಕಗಳು ಹೇಳುವುದಕ್ಕಿಂತ ಒಳ್ಳೆಯ ಹಾಗೂ ಹೆಚ್ಚಿನ ವಿಚಾರಗಳು ಗೀತೆಯಲ್ಲೇ ಇವೆ.

೩-೪ ವರ್ಷಗಳ ಹಿಂದೆ ಗೀತೆಯ ಸಾರದ ಬಗ್ಗೆ ಒಂದು ಮಿಂಚೆ(email) ಬಂದಿತ್ತು. ಅದರ ಒಂದು ಭಾಗ ಇಲ್ಲಿದೆ:

ಇದರಲ್ಲಿರುವ ಒಂದೊಂದು ವಾಕ್ಯವೂ ಅರ್ಥಪೂರ್ಣ.

ಗೀತೆಯ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ತುಂಬಾ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ. ತುಂಬಾ ಜನ ಇದರ ತಾತ್ಪರ್ಯ-ವಿವರಣೆ ಸಹಿತ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡದಲ್ಲಿ ನನ್ನ ಗಮನಕ್ಕೆ ಬಂದ ಪುಸ್ತಕಗಳು:
೧. ಗೀತಾ ಪ್ರೆಸ್ ನವರು ತುಂಬಾ ಗಾತ್ರಗಳಲ್ಲಿ ಪ್ರಕಟಿಸಿದ್ದಾರೆ. ಕೇವಲ ಶ್ಲೋಕ-ಅರ್ಥವಿರುವ ಪಾಕೆಟ್ ಸೈಜ್ ನಿಂದ ಶ್ಲೋಕ-ಅನ್ವಯಾರ್ಥ-ಅನುವಾದ-ತಾತ್ಪರ್ಯವಿರುವ ದೊಡ್ಡ ಪುಸ್ತಕವೂ ಇದೆ. (ವಿವರಣೆ ಜಯದಯಾಲ ಗೋಯಂದಕಾ). ಎಲ್ಲಾ ಪುಸ್ತಕಗಳಿಗಿಂತಲೂ ಇವು ಅಗ್ಗ.
೨. ಇಸ್ಕಾನ್ ನವರೂ ಅರ್ಥದೊಂದಿಗೆ ಪುಸ್ತಕ ಪ್ರಕಟಿಸಿದ್ದಾರೆ.
೩. ಮಾನ್ಯ ಡಿ. ವಿ. ಗುಂಡಪ್ಪನವರ ಪುಸ್ತಕವೂ ಇದೆ.
೪. ಚಿನ್ಮಯ ಮಿಷನ್ ನವರೂ ಅರ್ಥ ವಿವರಿಸಿ ಪುಸ್ತಕ ಬರೆದಿದ್ದಾರೆ.

ಗೀತೆಯ ಗಾಯನ ಮತ್ತು ಅರ್ಥ ವಿವರಣೆಯ ಒತ್ತಟ್ಟೆ(CD) ಗಳೂ ಲಭ್ಯ. ಅದರಲ್ಲಿ ಮುಖ್ಯವಾದದ್ದು ವಿದ್ಯಾಭೂಷಣರ ಗಾಯನದ ಒತ್ತಟ್ಟೆ. ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಅರ್ಥ ವಿವರಣೆ ಇರುವ ಬೇರೆ ಬೇರೆ ಒತ್ತಟ್ಟೆಗಳು ಸಿಗುತ್ತವೆ.

ಸಮಯ ಸಿಕ್ಕರೆ ಓದಿ, ಇಲ್ಲಾ ಕೇಳಿ. ಕೆಲಸದ ಝಂಝಾಟಗಳ ನಡುವೆ ಸ್ವಲ್ಪ ಜ್ಞಾನ ಸಂಪಾದನೆಯೂ ಆಗುತ್ತೆ, ಮನಸ್ಸಿಗೆ ನೆಮ್ಮದಿಯೂ ಸಿಗುತ್ತೆ.

07 April 2009

The WALL has safe hands

The great wall of the cricket world Rahul Dravid has made a new record of most test catches. He reached a mark of 183 catches in 134 test matches. He caught Tim McIntosh of Zaheer Khan's bowling in the slips in the fourth day of 3rd test match against New Zealand in Wellington to break Mark Waugh's record. He left behind Australia's Mark Waugh who has 181 catches against his name.

The "WALL" has Safe Hands !!!

05 April 2009

ಶಾಸ್ತ್ರೀಯ ಸಂಗೀತಕ್ಕಾಗಿ ಹೊಸ ಬ್ಲಾಗ್

ಶಾಸ್ತ್ರೀಯ ಸಂಗೀತಕ್ಕಾಗಿ ಹೊಸ ಬ್ಲಾಗ್ ಒಂದನ್ನು ಶುರು ಮಾಡಿದ್ದೀನಿ.
ಹಂಸಧ್ವನಿ : http://hamsa-dhwani.blogspot.com/
ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ಇಲ್ಲಿ ಹಾಕಲಾಗುವುದು.

I have opened a new blog for Classical Music.
Hamsadhwani : http://hamsa-dhwani.blogspot.com/
All articles related to Classical Music will be posted here.

27 March 2009

ಹೊಸ ವರ್ಷದ ಶುಭಾಶಯಗಳು


ನಿಮಗೂ, ನಿಮ್ಮ ಕುಟುಂಬದವರಿಗೂ, ನಿಮ್ಮ ಸ್ನೇಹಿತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ವಿರೋಧಿ ಸಂವತ್ಸರವು ನಿಮಗೆ ಶುಭಕರವಾಗಲಿ, ಸುಖ-ಸಮೃದ್ಧಿಗಳಿಂದ ಕೂಡಿರಲಿ.
ಸರ್ವಧಾರಿ ಸಂವತ್ಸರದ ಅನುಭವಗಳು ಹೊಸ ವರ್ಷದ ಸಾಧನೆಗಳಿಗೆ ಅಡಿಪಾಯವಾಗಲಿ.
ನೀವು ಅಂದುಕೊಂಡಿದ್ದನ್ನು ಸಾಧಿಸುವವರಾಗಿ.
ನೆಮ್ಮದಿಯ ಸುಖಮಯ ಬಾಳು ನಿಮ್ಮದಾಗಲಿ.


ಇಂದು ಚೈತ್ರ ಶುದ್ಧ ಪಾಡ್ಯ. ಹಿಂದುಗಳಿಗೆ ಇದು ಚಾಂದ್ರಮಾನ ಯುಗಾದಿ. ಚಾಂದ್ರಮಾನ ಅಂದ್ರೆ ಚಂದ್ರನ ಚಲನೆಯನ್ನು ಮಾನವಾಗಿಟ್ಟುಕೊಂಡು ತಿಥಿ/ತಿಂಗಳು/ವರ್ಷಗಳನ್ನು ಲೆಕ್ಕಾಚಾರ ಹಾಕುವುದು. ಸೂರ್ಯೋದಯದಿಂದ ದಿನದ, ಪಾಡ್ಯ(ಅಮಾವಾಸ್ಯೆಯ ಮರುದಿನ)ದಿಂದ ತಿಂಗಳ, ಯುಗಾದಿಯಿಂದ ವರ್ಷದ ಆರಂಭ. ಆ ಪ್ರಕಾರವೇ ನಾವು ನಾಗರಪಂಚಮಿ, ಗಣೇಶ ಚೌತಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ದಸರಾ, ದೀಪಾವಳಿ ಯಾವತ್ತು ಬರುತ್ತೆ ಅಂತ ಲೆಕ್ಕಾಚಾರ ಹಾಕೋದು ಮತ್ತು ಆಚರಿಸೋದು. ಅದರಂತೆ ಇದು ಹೊಸ ವರ್ಷದ ಮೊದಲ ದಿನ.

ಯುಗಾದಿ ದಿನ ಬೇವು-ಬೆಲ್ಲ ತಿನ್ನುವ ಪರಿಪಾಠವೂ ಇದೆ. ಜೀವನದಲ್ಲೂ ಕಷ್ಟ-ಸುಖಗಳು ಬೇವು-ಬೆಲ್ಲದಂತೆ ಕಹಿ ಮತ್ತು ಸಿಹಿ.
ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಅನ್ನೋದನ್ನು ಇದು ತಿಳಿಸಿಕೊಡುತ್ತದೆ.

ಗಣೇಶ ಚೌತಿಯಂದು ರಾತ್ರಿ ಚಂದ್ರ ದರ್ಶನ ಮಾಡಿದ್ರೆ ಅಪವಾದ ಬರುತ್ತೆ ಅನ್ತಾರೆ. ಮಹಾಭಾರತದಲ್ಲಿ ಶ್ರೀ ಕೃಷ್ಣ ಚೌತಿಯಂದು ಚಂದ್ರನನ್ನು ನೋಡಿದ್ದರಿಂದಾಗಿ ಶಮಂತಕ ಮಣಿಯನ್ನು ಕದ್ದ ಆಪಾದನೆ ಬಂದಿತ್ತು. ಆದರೆ ಯುಗಾದಿಯಂದು ಚಂದ್ರನನ್ನು ನೋಡಿದರೆ ಶುಭವಾಗುತ್ತದಂತೆ. ಆದ್ದರಿಂದ ಸಂಜೆ ಹೊತ್ತು ಎಲ್ಲರೂ ಆಗಸದ ಕಡೆ ನೋಡುತ್ತಿರುತ್ತಾರೆ.

ನಾವು ೭ನೇ ತರಗತಿಯಲ್ಲಿ ಕಲಿತು ಕಂಠಸ್ಥ ಮಾಡಿದ್ದ, ಅಂಬಿಕಾತನಯದತ್ತ ನಾಮಾಂಕಿತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ "ಯುಗಾದಿ" ಕವನವನ್ನು ಎಲ್ಲರೂ ಇಂದು ನೆನೆಸಿಕೊಳ್ಳುತ್ತಾರೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೇ ಏತಕೋ

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗದೇಕೊ ಬಾರದು
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೋ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನ್ನಷ್ಟೇ ಮರೆತಿದೆ

ಇಂದಿನಿಂದ ವಸಂತ ಋತು. ಎಲ್ಲಾ ಮರ-ಗಿಡಗಳು ಈ ಋತುವಿನಲ್ಲಿ ಚಿಗುರುತ್ತವೆ. ಹಾಗೇ ಮಾವಿನಮರ ಕೂಡಾ. ಅದರ ಚಿಗುರನ್ನು ತಿಂದು ಕೋಗಿಲೆ ಇಂಪಾಗಿ ಹಾಡುತ್ತದೆ ಅಂತ ಕವಿಗಳು ಬಣ್ಣಿಸುತ್ತಾರೆ. ಎಲ್ಲರಿಗೂ ವರ್ಷಕ್ಕೊಂದು ಹೊಸ ಜನ್ಮ ಸಿಗುತ್ತದೆ, ಆದರೆ ಆ ಭಾಗ್ಯ ನಮಗ್ಯಾಕಿಲ್ಲ, ಮಲಗಿದಾಗ ಮರಣ ಎದ್ದಾಗ ಹೊಸ ಜನ್ಮ ನಮಗೆ ಯಾಕೆ ಬರಲ್ಲ ಅಂತ ಬೇಂದ್ರೆಯವರು ಸೃಷ್ಟಿಕರ್ತನಲ್ಲಿ ಕೇಳುತ್ತಾರೆ.


|| ನವಂ ವರ್ಷಂ ಶುಭಂ ವಿದಧಾತು ||
Wish You a Very Happy & Prosperous New Year

22 March 2009

ರಾಮನವಮಿ ಸಂಗೀತೋತ್ಸವ ೨೦೦೯

ಯುಗಾದಿ-ರಾಮನವಮಿ ಬಂತು ಅಂದ್ರೆ ಬೆಂಗಳೂರಿನ ಶಾಸ್ತ್ರೀಯ ಸಂಗೀತಾಭಿಮಾನಿಗಳಿಗೆ ಸಂಗೀತದ ರಸದೌತಣ. ಚೆನ್ನೈನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಉತ್ಸವದಂತೆ ಬೆಂಗಳೂರಿನಲ್ಲಿ ರಾಮನವಮಿ ಸಂದರ್ಭದಲ್ಲಿ ನಡೆಯುತ್ತದೆ. ಶೇಷಾದ್ರಿಪುರ, ಶಂಕರಪುರ, ನರಸಿಂಹರಾಜ ಕಾಲೋನಿ ಹೀಗೆ ತುಂಬಾ ಕಡೆಗಳಲ್ಲಿ ಸಂಗೀತೋತ್ಸವಗಳು ನಡೆಯುತ್ತವೆ. ಆದರೆ ಚಾಮರಾಜ ಪೇಟೆಯ ಶ್ರೀ ರಾಮ ಸೇವಾ ಮಂಡಳಿಯವರು ಕೋಟೆ ಪ್ರೌಢ ಶಾಲೆಯ ಮೈದಾನದಲ್ಲಿ ನಡೆಸುವ ರಾಮನವಮಿ ಸಂಗೀತೋತ್ಸವ ತುಂಬಾ ಪ್ರಸಿದ್ಧ. ಜನರು ಇದಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ.

ಸಾಮಾನ್ಯವಾಗಿ ಯುಗಾದಿಯಂದು ಕುಮಾರಿ ಕನ್ಯಾಕುಮಾರಿಯವರ ಪಿಟೀಲು ಸಹಕಾರದೊಂದಿಗೆ ಕದ್ರಿ ಗೋಪಾಲನಾಥ್ ಅವರ ಕಛೇರಿಯೊಂದಿಗೆ ಆರಂಭವಾಗುವ ಉತ್ಸವ ೩೫-೪೦ ದಿನಗಳವರೆಗೆ ನಡೆಯುತ್ತದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಸಂಗೀತದ ಅತಿರಥ-ಮಹಾರಥರು ಇಲ್ಲಿ ಬಂದು ಗಾಯನ-ತನಿ ಸಂಗೀತ ಕಛೇರಿ ನಡೆಸಿಕೊಡುತ್ತಾರೆ. ಹಿಂದೆ ಸುಬ್ಬುಲಕ್ಷ್ಮೀ, ಭೀಮಸೇನ್ ಜೋಶಿ, ಚೆಂಬೈ ವೈದ್ಯನಾಥ ಭಾಗವತರು, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಟಿ ಆರ್ ಮಹಾಲಿಂಗಮ್, ಕುನ್ನಾಕುಡಿ ವೈದ್ಯನಾಥನ್ ಎಲ್ಲಾ ಬಂದು ಕಛೇರಿ ನಡೆಸಿಕೊಡ್ತಾ ಇದ್ರು. ಈಗ ವಿದ್ಯಾಭೂಷಣ, ಆರ್ ಕೆ ಶ್ರೀಕಂಠನ್, ಆರ್ ಕೆ ಪದ್ಮನಾಭ, ಎಸ್ ಶಂಕರ್, ಎಂ ಎಸ್ ಶೀಲಾ, ರುದ್ರಪಟ್ಣಂ ಸಹೋದರರು, ಬೆಂಗಳೂರು ಸಹೋದರರು, ಮೈಸೂರು ಸಹೋದರರು, ಸ್ಮಿತಾ ಬೆಳ್ಳೂರು, ಹಾರ್ಮೋನಿಯಮ್ ರಾಮದಾಸ್, ಪ್ರವೀಣ್ ಗೋಡ್ಖಿಂಡಿ, ಸುಮಾ ಸುಧೀಂದ್ರ, ಜ್ಯೋತ್ಸ್ನಾ ಶ್ರೀಕಾಂತ್, ಕಲಾವತಿ ಅವಧೂತ್, ಪಟ್ಟಾಭಿರಾಮ ಪಂಡಿತ್, ವಿನಯ್ ಶರ್ವ, ಅನಂತರಾಮ-ಅಮಿತ್ ನಾಡಿಗ್, ಯೇಸುದಾಸ್, ಕದ್ರಿ ಗೋಪಾಲನಾಥ್, ಕನ್ಯಾಕುಮಾರಿ, ಎಂ ಎಸ್ ಗೋಪಾಲಕೃಷ್ಣನ್, ಮ್ಯಾಂಡೋಲಿನ್ ಶ್ರೀನಿವಾಸ್, ಎನ್ ರಮಣಿ, ಪಿ ಉನ್ನಿಕೃಷ್ಣನ್, ಎಂ ಬಾಲಮುರಳಿ ಕೃಷ್ಣ, ಗಣೇಶ್-ಕುಮಾರೇಶ್, ಬಾಂಬೆ ಜಯಶ್ರೀ, ಸುಧಾ ರಘುನಾಥನ್, ಬಾಂಬೆ ಸಹೋದರಿಯರು, ಟಿ ಎಸ್ ಸತ್ಯವತಿ, ನಿತ್ಯಶ್ರೀ ಮಹಾದೇವನ್, ನಾಗಮಣಿ ಶ್ರೀನಾಥ್, ಸಂಗೀತಾ ಶಿವಕುಮಾರ್, ಟಿ ಎಂ ಕೃಷ್ಣ, ಸಂಜಯ್ ಸುಬ್ರಹ್ಮಣ್ಯಂ, ಮಲ್ಲಾಡಿ ಸಹೋದರರು, ಹೈದರಾಬಾದ್ ಸಹೋದರರು, ನೈವೇಲಿ ಸಂತಾನ ಗೋಪಾಲನ್, ಟಿ ಎನ್ ಕೃಷ್ಣನ್, ಟಿ ಎನ್ ಶೇಷಗೋಪಾಲನ್, ಟಿ ವಿ ಶಂಕರನಾರಾಯಣನ್, ಟಿ ವಿ ಗೋಪಾಲಕೃಷ್ಣನ್, ಎನ್ ರಾಜಮ್, ರೋನು ಮಜುಂದಾರ್, ಶುಭೇಂದ್ರ, ಅಮ್ಜದ್ ಅಲಿ ಖಾನ್ ಮುಂತಾದವರಲ್ಲಿ ಹೆಚ್ಚಿನವರು ಬಂದು ನಮ್ಮನ್ನು ಸಂಗೀತ ಸಾಗರದಲ್ಲಿ ತೇಲಿಸುತ್ತಾರೆ. ಸಂಗೀತ ಕಾರ್ಯಕ್ರಮಗಳು ಸಂಜೆ ೬-೩೦ರಿಂದ ೯-೩೦ರ ವರೆಗೆ ನಡೆಯುತ್ತವೆ. ಇಲ್ಲಿನ ಜನರ ಅಭಿರುಚಿಗೆ ತಕ್ಕಂತೆ ಹಿಂದುಸ್ಥಾನಿಗಿಂತ ಕರ್ನಾಟಕ ಶೈಲಿಯ ಸಂಗೀತವೇ ಜಾಸ್ತಿ.

ಸಂಜೆ ೫-೧೫ರಿಂದ ೬-೧೫ರ ವರೆಗೆ ಸಂಗೀತ ಪ್ರತಿಭಾಕಾಂಕ್ಷಿಗಳಿಂದ ಕಛೇರಿಗಳು ನಡೆಯುತ್ತವೆ. ಇದರಲ್ಲಿ ೩೦ ವರ್ಷಕ್ಕಿಂತ ಕೆಳಗಿನ ಅರಳುತ್ತಿರುವ ಪ್ರತಿಭೆಗಳು ಭಾಗವಹಿಸುತ್ತಾರೆ. ಇದರಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದವರನ್ನು ಉತ್ಸವದ ಕೊನೆಯಲ್ಲಿ ಪುರಸ್ಕರಿಸಲಾಗುತ್ತದೆ.

ಅಲ್ಲದೇ ಇತ್ತೀಚೆಗೆ ೪-೫ ವರ್ಷಗಳಿಂದ ಒಂದು ಒಳ್ಳೆಯ ಪರಿಪಾಠವನ್ನು ಆರಂಭಿಸಿದ್ದಾರೆ. ಅದೇನೆಂದರೆ ಸಂಗೀತ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರಿಗೆ ಎಸ್ ವಿ ನಾರಾಯಣಸ್ವಾಮಿ ಪ್ರಶಸ್ತಿಯನ್ನು ಕೊಡೋದು. ಹಿಂದೆ ಎಂ ಎಸ್ ಸುಬ್ಬುಲಕ್ಷ್ಮಿ, ಎಂ ಬಾಲಮುರಳಿ ಕೃಷ್ಣ, ಆರ್ ಆರ್ ಕೇಶವಮೂರ್ತಿ, ಆರ್ ಕೆ ಶ್ರೀಕಂಠನ್ ಇವರಿಗೆಲ್ಲಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಈ ಸಲ ಹಿಂದುಸ್ಥಾನಿ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ರವರನ್ನು ಆಯ್ಕೆ ಮಾಡಿದ್ದಾರಂತೆ.

ಸಂಗೀತದ ಜೊತೆಗೆ ಬೆಳಗ್ಗೆ ರಾಮಾಯಣ, ಮಹಾಭಾರತ, ಭಾಗವತದಂತಹ ಪುರಾಣಗಳ ಬಗ್ಗೆ ಉಪನ್ಯಾಸ-ಪಾರಾಯಣಗಳೂ ನಡೆಯುತ್ತವೆ.

ದಿವಂಗತ ಎಸ್ ವಿ ನಾರಾಯಣಸ್ವಾಮಿಯವರಿಂದ ೧೯೩೯ರಲ್ಲಿ ಆರಂಭವಾದ ಈ ಮಂಡಳಿ ಕಳೆದ ೭೦ ವರ್ಷಗಳಿಂದ ಸತತವಾಗಿ ಸಂಗೀತೋತ್ಸವಗಳನ್ನು ನಡೆಸಿಕೊಂಡು ಬಂದಿದೆ. ನಾನಂತೂ ೨೦೦೧ರಿಂದ ಪ್ರತಿ ವರ್ಷ ಹೋಗ್ತಾ ಇದ್ದೀನಿ. ಪ್ರತಿ ವರ್ಷ ೨೦ಕ್ಕೂ ಹೆಚ್ಚು ಕಛೇರಿಗಳನ್ನು ಕೇಳ್ತೀನಿ. ಈ ಸಲ ಎಪ್ರಿಲ್ ೩ರಂದು ಉತ್ಸವ ಆರಂಭವಾಗಲಿದೆ.

(ಕಛೇರಿ ಮಧ್ಯೆ ಎದ್ದು ಹೋಗುವುದು, ತನಿ ಆವರ್ತನ ಆರಂಭವಾದ ಕೂಡಲೆ ಮನೆಗೆ ಹೊರಡುವುದು, ಅಲ್ಲಿ ಕೂತು ಕಡ್ಲೆಪುರಿ ತಿನ್ನೋದು, ಜಂಗಮವಾಣಿಯಲ್ಲಿ ಮಾತಾಡೊದು ಎಲ್ಲಾ ಬೇಡ, ದಯವಿಟ್ಟು ಬೇಡ. ಇದರಿಂದ ಕಲಾವಿದರ ಏಕಾಗ್ರತೆಗೆ ಧಕ್ಕೆ ಬರುತ್ತೆ ಇಲ್ಲಾ ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಅಲ್ಲದೇ ಪಕ್ಕದಲ್ಲಿ ಕುಳಿತವರಿಗೆ ತೊಂದರೆ.)

ನೀವೂ ಸಂಗೀತಾಸಕ್ತರಾಗಿದ್ದರೆ ಕಾರ್ಯಕ್ರಮ ಪಟ್ಟಿ ನೋಡಿ ಬನ್ನಿ. ಸಂಗೀತದ ರಸದೌತಣವನ್ನು ಸವಿಯೋಣ.

ಸಂಚಾರ ದಟ್ಟಣೆಗೆ ಏನು ಪರಿಹಾರ ?

ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಸಂಖ್ಯೆಗಳಿಂದಾಗಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ವಾಯು ಹಾಗೂ ಶಬ್ದ ಮಲಿನಗೊಳ್ಳುತ್ತಿದೆ. ಅಪಘಾತಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಏನು ಪರಿಹಾರ ? ರಸ್ತೆ ಅಗಲೀಕರಣ ಹಾಗೂ ಮೇಲು ಸೇತುವೆಗಳು ಸಮಸ್ಯೆಯನ್ನು ಪರಿಹರಿಸೋದಿಲ್ಲ. ೪-೫ ತಿಂಗಳಲ್ಲಿ ವಾಹನಗಳ ಸಂಖ್ಯೆ ಅಷ್ಟೆ ಏರುತ್ತದೆ. ಹಾಗಿದ್ದರೆ ಏನು ಮಾಡಬಹುದು ?

ನಾನು ಹೀಗೇ ಕುಳಿತು ಯೋಚನೆ ಮಾಡುತ್ತಿರಬೇಕಾದರೆ, ಕೆಲವು ವಿಚಾರಗಳು ನನ್ನ ಮನಸ್ಸಿಗೆ ತೋಚಿದವು.

ಹೊಸ ಉದ್ಯಮ/ಕಂಪನಿ ಯಾವುದೇ ಇರಲಿ ಬೆಂಗಳೂರು ಬಿಟ್ಟು ಮೈಸೂರು, ಮಂಗಳೂರು, ದಾವಣೆಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ತುಮಕೂರು ಬೇರೆ ಬೇರೆ ಕಡೆ ಸ್ಥಾಪನೆಯಾಗಲಿ. ಅಲ್ಲಿ ಕೂಡ ರಸ್ತೆ, ನೀರು, ವಿದ್ಯುತ್ ಹಾಗೂ ಇನ್ನಿತರ ಸೌಕರ್ಯಗಳು ಅಭಿವೃದ್ಧಿಯಾಗಲಿ. ಆವಾಗ ಜನರು/ವಾಹನಗಳು ಬೇರೆ ಬೇರೆ ನಗರಗಳಲ್ಲಿ ಹಂಚಿ ಹೋಗುತ್ತಾರೆ. ಏರುತ್ತಿರುವ ಮನೆ/ಸೈಟ್ ಬೆಲೆಗಳಿಗೂ ಸ್ವಲ್ಪ ಕಡಿವಾಣ ಬೀಳಬಹುದು. ಈ ಕೆಲಸ ಮುಂಚೆನೇ ಆಗಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತು ಇದನ್ನು ಜಾರಿಗೊಳಿಸಬಹುದು.

ಬೆಂಗಳೂರು ನಗರದಲ್ಲಿ ಈವಾಗಲೇ ಜನ/ವಾಹನ ದಟ್ಟಣೆ ಇರುವ ಬಡಾವಣೆಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಹೊಸ ಕಂಪನಿಯ ಬಹುಮಹಡಿ ಕಟ್ಟಡಗಳು, ವಸತಿ ಸಮುಚ್ಚಯಗಳನ್ನು ಕಟ್ಟಲು ಅನುಮತಿ ಕೊಡಬಾರದು. ಬೆಂಗಳೂರಿನ ಹೊರವಲಯಗಳಲ್ಲಿ ಇಂತಹ ಕಟ್ಟಡಗಳನ್ನು ಕಟ್ಟಲಿ. ನಗರ ಅಗಲವಾಗಿ ಬೆಳೆಯಲಿ, ಎತ್ತರಕ್ಕೆ ಬೇಡ.

ಸುಭಾಶ್ ನಗರ, ಶಿವಾಜಿನಗರ, ಶಾಂತಿನಗರ, ಕೃ. ರಾ. ಮಾರುಕಟ್ಟೆ, ಮೈಸೂರು ರಸ್ತೆಗಳಲ್ಲಿ ಈಗ ಇರುವಂತೆ ಬಸ್ ನಿಲ್ದಾಣಗಳನ್ನು ಇನ್ನೂ ಹೆಚ್ಚಿನ ಕಡೆಗಳಲ್ಲಿ ಕಟ್ಟಲಿ. ಅಲ್ಲಿಂದ ನಗರದ ಎಲ್ಲಾ ಭಾಗಗಳಿಗೂ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಗೂ ನೇರ ಬಸ್ ಸೌಲಭ್ಯ ಒದಗಿಸಲಿ.

೩-೪ ಜನ ಒಂದೇ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಕಾರ್ ಪೂಲಿಂಗನ್ನು (Car pooling ) ಸಮರ್ಥವಾಗಿ ಬಳಸಲಿ. ೪ ಜನ, ೪ ಕಾರಿನಲ್ಲಿ ಹೋಗೋದು ಬಿಟ್ಟು, ಒಂದೇ ಕಾರಿನಲ್ಲಿ ಕಚೇರಿಗೆ ಹೋಗಿ ಬರಬಹುದು. ಒಂದೊಂದು ದಿನ ಒಬ್ಬೊಬ್ಬರ ಕಾರ್ ಉಪಯೋಗಿಸಬಹುದು. ಸಂಚಾರ ದಟ್ಟಣೆ ಕಡಿಮೆಯಾಗುತ್ತೆ, ಇಂಧನ ಉಳಿತಾಯವಾಗುತ್ತೆ, ಮಾಲಿನ್ಯದ ಪ್ರಮಾಣವೂ ಕಡಿಮೆಯಾಗುತ್ತೆ. ಹಾಗೇ ಒಬ್ಬರು ಕಾರ್ ಚಲಾಯಿಸುತ್ತಿದ್ದರೆ, ಉಳಿದವರು ಸಂಗೀತ ಕೇಳುವುದು, ಓದುವುದು ಹೀಗೆ ಬೇರೆ ಕೆಲಸ ಮಾಡಿಕೊಂಡು ಸಮಯದ ಸದುಪಯೋಗ ಮಾಡಿಕೊಳ್ಳಬಹುದು.

ಹೆಚ್ಚುತ್ತಿರುವ ವಾಹನಗಳಿಂದಾಗಿ ಬೆಂಗಳೂರು ಇನ್ನೊಂದು ಮುಂಬೈ ಆಗದಿರಲಿ. ನಮ್ಮ ಬೆಂಗಳೂರಿನಲ್ಲಿ ಸಂಚಾರದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಅಪಘಾತಗಳು ಕಡಿಮೆಯಾಗಲಿ ಎಂಬುದೇ ನನ್ನ ಆಶಯ. ರೋಗ ಬರೋಕೆ ಮುಂಚೆ ಅದು ಬಾರದಂತೆ ತಡೆಗಟ್ಟೋದು ಸುಲಭ ಹಾಗೂ ಒಳ್ಳೆಯದಲ್ವೇ ?

14 March 2009

ಕೃಷಿಕ ಬಡವನಾಗೇ ಇರಬೇಕೇ ?

"ಹಳ್ಳಿಗಳಲ್ಲಿ ಕೂಲಿ ಕೆಲಸದವರ ಕೊರತೆ ಇದೆ, ಈಗಿನ ಜನಾಂಗದ ಹಳ್ಳಿಯ ಜನ ನಗರಕ್ಕೆ ಹೋಗಿ ಕೆಲಸಕ್ಕೆ ಸೇರ್ಕೋತಾರೆ, ಹಳ್ಳಿಗಳಲ್ಲಿ ಕೃಷಿ ಮಾಡೋರು ಯಾರೂ ಇಲ್ಲ, ತೋಟಗಳು ಒಣಗಿ ಹೋಗಿವೆ, ಗದ್ದೆಗಳು ಖಾಲಿ ಬಿದ್ದಿವೆ, ಅಲ್ಲಿರುವ ಹೆತ್ತವರಿಗೆ ಒಂಟಿತನ ಕಾಡುತ್ತಿದೆ" ..... ಹೀಗೆಲ್ಲಾ ನಾವು ಕೇಳುತ್ತೇವೆ, ಪತ್ರಿಕೆಗಳಲ್ಲಿ ಓದುತ್ತೇವೆ.

ಕಾರಣ:
ಹಳ್ಳಿಯಲ್ಲಿ ಜಮೀನು ಇದ್ರೂನೂ ಕೂಲಿ ಕೆಲಸದವರು ಸಿಗಲ್ಲ. ಬರೇ ಮನೆಯವರೇ ಸೇರಿ ಭತ್ತದ ವ್ಯವಸಾಯ ಮಾಡೋಕೆ ಸಾಧ್ಯವೇ ಇಲ್ಲ. ಬೆಳೆ ಬೆಳೆದ್ರೂನೂ ಹೊಟ್ಟೆ ತುಂಬಿಸ್ಕೋಬಹುದು. ಏನೂ ಉಳಿಯಲ್ಲ. ಹೀಗಿರೋವಾಗ ಕೃಷಿಗೆ ಬೇಕಾದ ಆಧುನಿಕ ಪರಿಕರಗಳನ್ನು ಕೊಳ್ಳೋದು ಹೇಗೆ ? ಪೇಟೆಯವರ ಹಾಗೆ ಮನೆ, ಸೌಕರ್ಯಗಳನ್ನು ಮಾಡ್ಕೊಳ್ಳೋದು ಹೇಗೆ ? ಅಕ್ಕಿ ಬೆಲೆ ಕೆ. ಜಿ. ಗೆ ೩೫ ರೂ. ಆಗಿದೆ. ಆದ್ರೆ ಅದರಲ್ಲಿ ಎಷ್ಟು ಭಾಗ ಬೆಳೆದ ರೈತನಿಗೆ ಸಿಗುತ್ತೆ ?

ಹಳ್ಳಿಗರು/ಕೃಷಿಕರು ಸಿನಿಮಾದಲ್ಲಿ ಅಥವಾ ಕಾರ್ಯ ನಿಮಿತ್ತ ನಗರಕ್ಕೆ ಹೋದಾಗ ನಗರವಾಸಿಗಳನ್ನೂ, ನಗರದ ವ್ಯವಸ್ಥೆಗಳನ್ನೂ, ಸೌಕರ್ಯಗಳನ್ನೂ ನೋಡುತ್ತಾರೆ. ನಗರದ ಜನರು ಕೋಟು-ಬೂಟು ಹಾಕಿ ಕಾರಲ್ಲಿ ಕೂತು ಕಚೇರಿಗೆ ಹೋಗೋದನ್ನು ನೋಡಿ ಆಕರ್ಷಿತರಾಗುತ್ತಾರೆ. ಅಥವಾ ತಮ್ಮ ಊರಿನ ಕೆಲವರು ಓದಿ, ನಗರಕ್ಕೆ/ವಿದೇಶಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಂಡಿರುವವರನ್ನೂ ನೋಡುತ್ತಾರೆ. "ನಮ್ಮಿಂದ ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳನ್ನು ಚೆನ್ನಾಗಿ ಓದಿಸ್ತೀವಿ. ನಮ್ಮ ಮಕ್ಕಳೂ ಅವರ ಥರ ನಗರಕ್ಕೆ ಹೋಗಿ ದೊಡ್ಡ ಆಫೀಸರ್ ಆಗ್ಬೇಕು. ನಮ್ಮ ಥರ ಬಿಸಿಲಲ್ಲಿ ಗದ್ದೆಯಲ್ಲಿ/ತೋಟದಲ್ಲಿ ಕೆಲಸ ಮಾಡೋದು ಬೇಡ." ಅಂತ ಆಸೆ ಪಟ್ಕೋತಾರೆ. ಹಾಗೇ ಮಕ್ಕಳೂ ಓದಿದ ನಂತರ ನಗರಕ್ಕೆ ಹೋಗಿ ಕೆಲಸಕ್ಕೆ ಸೇರ್ಕೋತಾರೆ. ಆಮೇಲೆ ಮಕ್ಕಳಿಗೂ ತಮ್ಮ ಹೆತ್ತವರು ತಮ್ಮ ಜೊತೆ ಇರಬೇಕು, ಹಳ್ಳಿಯಲ್ಲಿ ಅವರನ್ನು ನೋಡ್ಕೊಳ್ಳೋರು ಇಲ್ಲ, ಅವರು ಬಿಸಿಲಲ್ಲಿ ಕಷ್ಟ ಪಡೋದು ಬೇಡ ಅಂತ ಅನ್ನಿಸುತ್ತೆ. ಅಲ್ಲಿನ ಜಮೀನು ಮಾರಿ ಅವರನ್ನು ನಗರಕ್ಕೆ ಕರೆಸಿಕೊಳ್ತಾರೆ.

ನನ್ನ ಅನಿಸಿಕೆ ಪ್ರಕಾರ ಇದು ತಪ್ಪಲ್ಲ. ಆಸೆ ಎಲ್ಲರಿಗೂ ಇರುತ್ತೆ. ಕನಸು ಎಲ್ಲರೂ ಕಾಣುತ್ತಾರೆ. ಹಣ, ಆಸ್ತಿ, ಅಂತಸ್ತು, ಮನೆ, ಕಾರು ಎಲ್ಲರಿಗೂ ಬೇಕು. ನಗರವಾಸಿಗಳು/ಶ್ರೀಮಂತರು ನಗರದಲ್ಲೇ ಇರಬೇಕು, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು, ಅವರ ವಂಶಸ್ಥರೆಲ್ಲಾ ನಗರದಲ್ಲೇ ಆಫೀಸ್ ಕೆಲಸಕ್ಕೇ ಹೋಗಬೇಕು, ಕಾರಲ್ಲಿ ಕೂತು ಭುರ್ರ್ ಅಂತ ಓಡಾಡಬೇಕು, ಆದರೆ ಕೃಷಿಕರು ಹಳ್ಳಿಯಲ್ಲೇ ಇರಬೇಕು, ಬಡವರಾಗೇ ಇರಬೇಕು, ಬಿಸಿಲಲ್ಲಿ ಬೆವರು ಸುರಿಸಿ ಕೆಲಸ ಮಾಡಬೇಕು ಮತ್ತು ನಗರವಾಸಿಗಳ ಹೊಟ್ಟೆ ತುಂಬಿಸಬೇಕು. ಶ್ರೀಮಂತರು ಇನ್ನೂ ಶ್ರೀಮಂತರಾಗಬೇಕು, ಕೃಷಿಕ ಮಾತ್ರ ಬಡವನಾಗೇ ಇರಬೇಕು. ಇದು ಒಪ್ಪ ತಕ್ಕ ಸಿದ್ಧಾಂತವೇ ? "ರೈತ ದೇಶದ ಬೆನ್ನೆಲುಬು" ಅಂತಾರೆ. ಆದ್ರೆ ಅವನು ಯಾವಾಗ್ಲೂ ಬೆನ್ನೆಲುಬಾಗಿದ್ದು ಕಷ್ಟ ಅನುಭವಿಸ್ತಾ ಇರಬೇಕೇ ? ಕಣ್ಣು, ಕಿವಿ, ಮೂಗು, ನಾಲಗೆಯಾಗಿ ಸುಖ ಪಡೋದು ಬೇಡವೆ ?

ಪರಿಹಾರ ?
ಸರಕಾರ ಒಂದು ಕಾನೂನು ಮಾಡಿ, "ನಗರದವರು ಎಲ್ಲರೂ ಆವರ್ತನೆಯಲ್ಲಿ(Rotation Basis) ಹಳ್ಳಿಗೆ ಹೋಗಿ ಇಂತಿಷ್ಟು ವರ್ಷ ವ್ಯವಸಾಯ ಮಾಡಬೇಕು" ಅಂದ್ರೆ ಹೇಗೆ ? ಇಂತಹ ಕಾನೂನು ಮಾಡಿದ್ರೂ ಅದನ್ನು ಜಾರಿಗೆ ತರೋದು ಕಷ್ಟ, ನಗರದವರು ಒಪ್ಪಲ್ಲ.

ಅಥವಾ ನಗರದವರು ಸ್ವಇಚ್ಛೆಯಿಂದ ಹಳ್ಳಿಗಳಿಗೆ ಹೋಗಿ ಜಮೀನು ತಗೊಂಡು ವ್ಯವಸಾಯ ಮಾಡಬೇಕು. ಕೆಲವರು ಜಮೀನು ತಗೋತಾರೆ, ಆದ್ರೆ ತಾವಾಗಿ ಅಲ್ಲಿ ಹೊಲದಲ್ಲಿ ಕೆಲಸ ಮಾಡಲ್ಲ. ಕೆಲಸಕ್ಕೆ ಕೂಲಿಗಳನ್ನು ಇಟ್ಕೋತಾರೆ. ತಾವೇ ಕೆಲಸ ಮಾಡಿದ್ರೆ ಕೃಷಿಕನ ಕಷ್ಟ ಏನು ಅಂತ ಗೊತ್ತಾಗುತ್ತೆ.

ಇಲ್ಲಾ ಕೆ.ಜಿ. ಅಕ್ಕಿಗೆ ೩೦೦ ರೂ., ಬೇಳೆಗೆ ೫೦೦ ರೂ., ಟೊಮೆಟೋಗೆ ೧೦೦ ರೂ. ಆಗಲಿ. ಆವಾಗ ಎಲ್ಲರೂ ಹಳ್ಳಿ ಕಡೆ ಮುಖ ಮಾಡ್ತಾರೆ. ಕೋರಮಂಗಲ/ಇಂದಿರಾನಗರದ ಸೈಟ್ ಬೆಲೆ ಹಳ್ಳಿಯ ಜಮೀನಿಗೆ ಬರುತ್ತೆ. ಹಳ್ಳಿಗಳಲ್ಲಿ ಬೆಳೆ ಬೆಳೆಸೋಕೆ, ಮಾರೋಕೆ ಹೊಸ ಕಂಪೆನಿಗಳು ಉದಯಿಸಬಹುದು, ಇಳುವರಿ ಹೆಚ್ಚಿಸಲು ಸಂಶೋಧನೆಗಳಾಗಬಹುದು, ಹೊಸ ಹೊಸ ಪೇಟೆಂಟ್ ಗಳು ಆಗಬಹುದು. ಹೊಸ ಹೊಸ ಯಂತ್ರೋಪಕರಣಗಳು ಬರಬಹುದು. ಕ್ರೆಡಿಟ್ ಕಾರ್ಡ್ ಏಜಂಟ್ ಗಳು ರೈತರ ಬಾಲ ಹಿಡಿಯಬಹುದು. ಒಟ್ಟಿನಲ್ಲಿ ಕ್ರಾಂತಿಯಾಗಬಹುದು.

ಏನಂತೀರಿ ?

ನಿಮ್ಮಲ್ಲಿ ಇನ್ನು ಏನಾದರೂ ಪರಿಹಾರ ಇದೆಯಾ ? ಬರೆದು ಕಳುಹಿಸಿ.


23 February 2009

ಹೆಸರಲ್ಲೇನಿದೆ ?

ಒಂದು ನಗೆ ಬರಹ ..........

ಹಿಂದೆ ಮಕ್ಕಳಿಗೆ ಹೆಸರಿಡುವಾಗ ದೇವರ ಹೆಸರು ಇಡುತ್ತಿದ್ದರು. ಯಾಕಂದ್ರೆ ಮಕ್ಕಳು ದೇವರ ಥರಾ ಒಳ್ಳೆಯವರಾಗಲಿ ಎಂದು ಅಥವಾ ಮಕ್ಕಳನ್ನು ಕರೆಯುವ ಸಲುವಾಗಿ ದೇವರನಾಮ ತಮ್ಮ ಬಾಯಲ್ಲಿ ಬರುತ್ತೆ ಅಂತ. (ಹಿಂದೆ ಯಮನ ದೂತರು ಬಂದು ಅಜಾಮಿಳನ ಕೊರಳಿಗೆ ಯಮಪಾಶ ಬಿಗಿದಾಗ, "ನಾರಾಯಣ" ಎಂಬ ತನ್ನ ಮಗನನ್ನು ಕರೆದಿದ್ದರಿಂದ ಅವನ ಪ್ರಾಣ ಉಳಿಯಿತಂತೆ.) ಕ್ರಮೇಣ ಈ ಅಭ್ಯಾಸ ಬದಲಾಯಿತು. ಪ್ರಸಿದ್ಧ ವ್ಯಕ್ತಿಗಳ, ಸಿನಿಮಾ ನಟ/ನಟಿಯರ, ಆಟಗಾರರ ಹೆಸರು ಇಡಲು ಆರಂಭಿಸಿದರು. ಈಗಿನವರು ಇನ್ನೂ ಮುಂದುವರಿದಿದ್ದಾರೆ. ಈಗ ಇರುವ ಹೆಸರುಗಳ ಬಗ್ಗೆ "ಅದೇನದು ಹಳೇ ಹೆಸರು ? ಓಬೀರಾಯನ ಕಾಲದ್ದು !!" ಎಂದು ಮೂಗು ಮುರಿಯುತ್ತಾರೆ. ಯಾರೂ ಇಡದ, ಎಲ್ಲಿಯೂ ಇಲ್ಲದ ಹೊಸ ಹೆಸರಿನ ತಲಾಶೆಯಲ್ಲಿದ್ದಾರೆ ಜನ. ಕೆಲವರು ಯಾವುದೋ ಪಾಶ್ಚಾತ್ಯರ ಹೆಸರು ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ಹಳೆಯ ಹೆಸರಿನ ಕೆಲವು ಅಕ್ಷರಗಳನ್ನು ನುಂಗಿ, ಸ್ವರಗಳನ್ನು ಸ್ಥಾನಪಲ್ಲಟಗೊಳಿಸಿ, ಎರಡು ಅರ್ಧ-ಅರ್ಧ ಹೆಸರುಗಳನ್ನು ಸೇರಿಸಿ ಹೊಸ "ಶಬ್ದ"ದ ಸಂಶೋಧನೆ ಮಾಡುತ್ತಾರೆ. ಆ "ಶಬ್ದ"ವನ್ನೇ ಮಗುವಿಗೆ "ಹೆಸರು" ಅಂತ ಇಡುತ್ತಾರೆ.

ಹಿಂದಿನ ಹೆಸರುಗಳಿಗೆ ಒಳ್ಳೆಯ ಅರ್ಥಗಳಿದ್ದವು. ನಾಮ ಅಂಕಿತವಾದರೂ ಅನ್ವರ್ಥವಾಗಲಿ ಎಂದು ಹೆತ್ತವರು ಹಾರೈಸುತ್ತಿದ್ದರು. ಆದರೆ ಈಗಿನವು ಇಟ್ಟವರಿಗೇ ಪ್ರೀತಿ. ಕೆಲವು ಸಂಶೋಧಿತ ಹೆಸರುಗಳು "ಒಳ್ಳೆಯ" ಋಣಾತ್ಮಕ ಅರ್ಥ ಹೊಂದಿವೆ. ಇನ್ನು ಕೆಲವಕ್ಕೆ ಭಾರತದ ಯಾವುದೇ ಭಾಷೆಯ ಅರ್ಥಕೋಶ ತೆರೆದು ನೋಡಿದರೂ ಅರ್ಥ ಸಿಗಲಿಕ್ಕಿಲ್ಲ. ಈ ಪದಗಳಿಗೆ ಹೊಸ ಅರ್ಥ ಕೊಟ್ಟು ಅರ್ಥಕೋಶಕ್ಕೆ ಸೇರಿಸಬೇಕು.

"ಬೆಳದಿಂಗಳ ಬಾಲೆ" ಕನ್ನಡ ಚಲನಚಿತ್ರದಲ್ಲಿ ನಾಯಕನ ಹೆಸರು "ರೇವಂತ್". ನಾಯಕಿ ಇದರ ಅರ್ಥದ ಬಗ್ಗೆ ಕೇಳಿದಾಗ ತುಂಬಾ ಕಷ್ಟಪಟ್ಟು ಕಂಡುಹಿಡಿಯುತ್ತಾನೆ - ರೇವಂತ್ ಅಂದ್ರೆ "ಸಮುದ್ರದ ದಂಡೆಯಲ್ಲಿ ಕುದುರೆ ತೊಳೆಯುವವ" ಎಂದು.

ಕೆಲವರು ಈಗಿರುವ ಹೆಸರು ದುರಾದೃಷ್ಟಕರ ಅಂತ, ಸಂಖ್ಯಾಶಾಸ್ತ್ರಜ್ಞರ ಜೇಬು ತುಂಬಿಸಿ ಹೆಸರುಗಳನ್ನು ಬದಲಾಯಿಸುತ್ತಾರೆ. ಹೆಸರಿನಲ್ಲಿ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸುತ್ತಾರೆ ಅಥವಾ ಬದಲಾಯಿಸುತ್ತಾರೆ. ಹೀಗೆ ಹೆಸರುಗಳನ್ನು ಬದಲಾಯಿಸುವ ಹಿಂದಿ ಚಲನಚಿತ್ರ ನಟ/ನಟಿಯರ ಬಗ್ಗೆ ಕಳೆದ ವರ್ಷ ಟಿವಿಯಲ್ಲಿ ಪ್ರಸಾರವಾದ ಒಂದು ಕಾರ್ಯಕ್ರಮವನ್ನು ನಾನು ನೋಡಿದ್ದೆ.

ತಪ್ಪು ಅಂತ ಹೇಳ್ತಾ ಇಲ್ಲ, ಆದ್ರೆ ನಾನು ಕೇಳಿದ ಕೆಲವು ಹೆಸರುಗಳು ಹೀಗಿವೆ:

ಪ್ರಮಾದ್ : ಅಂದರೆ "ತಪ್ಪು" (ಬಹುಶಃ ಇದು ಪ್ರಮೋದ್ ನ ರೂಪಾಂತರ). ಈತ ಯಾವಾಗ್ಲೂ ತಪ್ಪು ಮಾಡ್ತಿರ್ತಾನೆ ಅಂತನಾ ? ಇನ್ನೇನೋ ಗೊತ್ತಿಲ್ಲ.

ಅಂಜೇಶ್ : ಇದು ಅಂಜನಾ+ರಾಜೇಶ್ ಇರಬಹುದು. ತುಂಬಾ ಧೈರ್ಯ ಇರುವವನಿಗೆ ಧೀರಜ್ ಅಂತಾರೆ. ಈತ ತುಂಬಾ ಹೆದರು ಪುಕ್ಕಲ.

ಮಗಧ್ : ಹಿಂದೆ ಈ ಹೆಸರಿನ ದೇಶ ಇತ್ತಂತೆ. ಪರ್ವಾಗಿಲ್ಲ ಭರತ್, ಭಾರತಿ ಎಂಬ ಹೆಸರುಗಳಿವೆ.

ಚಾರ್ಮೇಶ್ : ಒಂದು ಕಾರ್ ಮೇಲೆ ಈ ಹೆಸರು ನೋಡಿದೆ. ಏನು ಅಂತ ಅರ್ಥ ಆಗ್ಲಿಲ್ಲ.

ಇನ್ನೂ ತುಂಬಾ ಕೇಳಿದ್ದೀನಿ. ನೆನಪಿಗೆ ಬರುತ್ತಿಲ್ಲ. ನಿಮಗೆ ಇಂಥಾ ಹೆಸರುಗಳು ಗೊತ್ತಿದ್ದರೆ ಕಳಿಸಿ.

ನಾನೂ ಕೆಲವೊಂದು ಹೊಸ ಹೆಸರುಗಳನ್ನು ಸಂಶೋಧಿಸಬಲ್ಲೆ....
ಕರ್ಕೇಶ್, ಪೋಂಕ್ರೇಶ್, ಅಂತೇಶ್, ರಮಿತಾಭ್, ಕಾಮಂತ್, ಚಿರಂತ್, ಸುವಂತ್, ಅಜಿತೇಶ್, ಅಜಿಷೇಕ್, ಅನುಜಿತ್, ಅನುಚಿತ್, ಕಜಯ್, ಬೃಜಯ್, ಬಜ್ಜಯ್, ಕೃತಿಕ್, ತಿಕ್ಕೇಶ್, ತಿಕ್ಲೇಶ್, ಮಟಾಶ್ (?), ಮಾಗೇಶ್, ಗಣಿಕಾಂತ್, ಗಣಿವಂತ್, ಪ್ರೀತಿಕಾ, ಕವಿಕಾ, ಜತಿಕಾ, ಮತ್ತಿಖಾ, ಭೋಂಪ್ಳೊ, ಮಿಲಿನಿ, ಲಾಲಿನಿ, ಕಾಳಿನಿ, ಕಾಳೇಂದ್ರಿ ....... ಹೀಗೆ.

ಚೆನ್ನಾಗಿದೆ ಅಂತ ಅನಿಸಿದ್ರೆ ಹೆಕ್ಕಿಕೊಳ್ಳಿ.

ಆದ್ರೂ ............. ಹೆಸರಲ್ಲೇನಿದೆ ? ಅಲ್ವೇ ?

03 February 2009

ಇಹ ಲೋಕ ಯಾತ್ರೆ ಮುಗಿಸಿದ ಯಕ್ಷರಂಗದ ಸಾರ್ವಭೌಮ ಕೆರೆಮನೆ ಶಂಭುಹೆಗಡೆ

ಕೆರೆಮನೆ ಶಂಭು ಹೆಗಡೆ

ಬಡಗುತಿಟ್ಟಿನ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಶಂಭು ಹೆಗಡೆ ಇನ್ನಿಲ್ಲ. ತಂದೆ ಶಿವರಾಮ ಹೆಗಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಇವರು ಯಕ್ಷಗಾನದಲ್ಲಿ ಅಪರಿಮಿತವಾದುದನ್ನು ಸಾಧಿಸಿ ಮೇರುಶಿಖರವನ್ನೇರಿದರು. ಇವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಯಾವುದೇ ಸಾಧಕರು ತಮ್ಮ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗಲೇ ಕೊನೆಯುಸಿರೆಳೆಯಲು ಇಚ್ಛಿಸುತ್ತಾರೆ. ಈ ವಿಷಯದಲ್ಲಿ ಶಂಭು ಹೆಗಡೆಯವರು ಭಾಗ್ಯಶಾಲಿಗಳು. ಯಾವುದೋ ಒಂದು ಸರಕಾರಿ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿ, ೨೦-೩೦ ವರ್ಷ ಮನೆಯಲ್ಲಿ ದಿನವೆಣಿಸುತ್ತಿರುವ ಯಾರಾದರೂ ಸತ್ತರೆ, "ಇವರ ಮರಣದಿಂದ, ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟ !!! " ಎನ್ನುತ್ತಾರೆ. ಆದರೆ ಕೊನೆಯವರೆಗೂ ಕಾರ್ಯಪ್ರವೃತ್ತರಾಗಿದ್ದ ಹೆಗಡೆಯವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ. ಇದ್ದಿದ್ದರೆ ಇನ್ನಷ್ಟು ಸಾಧಿಸುತ್ತಿದ್ದರು. ಇವರ ಮಕ್ಕಳು, ಮೊಮ್ಮಕ್ಕಳ ಮೇಲೆ ಕೆರೆಮನೆ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇದೆ.


ಈ ಹಿರಿಯರ ಆತ್ಮಕ್ಕೆ ಇಡಗುಂಜಿ ಮಹಾಗಣಪತಿ ಶಾಂತಿಯನ್ನು ದೊರಕಿಸಿ ಕೊಡಲಿ.



ಹೆಚ್ಚಿನ ಮಾಹಿತಿಗಾಗಿ ಓದಿ:
ಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ

ಕವಿದುಬಿದ್ದರು ಶಂಭುಹೆಗಡೆ ಹರಿಯ ಚರಣದಲಿ

Keremane Shambhu Hegde



02 February 2009

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?
ಆಥವಾ ಕೇವಲ ಭಾರತದ ಬಡತನ ಹಾಗೂ ಕೊಳೆಗೇರಿಗಳನ್ನು ತೋರಿಸಿ ವಿದೇಶದ ನಿರ್ದೇಶಕ/ನಿರ್ಮಾಪಕರು ದುಡ್ಡು ಮಾಡುತ್ತಿದ್ದಾರೆಯೇ ? ಅಮೇರಿಕಾದಲ್ಲಿ ಬಡವರಿಲ್ಲವೇ ? ಕೊಳೆಗೇರಿಗಳಿಲ್ಲವೇ ? ಭ್ರಷ್ಟಾಚಾರವಿಲ್ಲವೇ ? ನಿರ್ಜನ ಪ್ರದೇಶದಲ್ಲಿ ಹೋಗುತ್ತಿರುವವರನ್ನು ನಿಲ್ಲಿಸಿ, ಗನ್ ತೋರಿಸಿ ದುಡ್ಡು ಕೀಳುವವರಿಲ್ಲವೇ ? ದುಡ್ಡು ಕೊಡಲು ನಿರಾಕರಿಸಿದಾಗ ಕೊಲ್ಲುವುದಿಲ್ಲವೇ ? ಕೆಲಸಕ್ಕೆ ಅಥವಾ ಉನ್ನತ ವ್ಯಾಸಂಗಕ್ಕೆಂದು ಭಾರತದಿಂದ ಅಲ್ಲಿಗೆ ಹೋದವರು ಮೃತರಾಗಿಲ್ಲವೇ ? ಆದರೆ ನಾನು ನೋಡಿರುವ ಇಂಗ್ಲಿಷ್ ಚಿತ್ರಗಳಲ್ಲಿ ಕೇವಲ ಐಷಾರಾಮಿ ಮನೆ/ಆಫೀಸು/ಕಟ್ಟಡ/ವಿಮಾನ/ಹಡಗುಗಳನ್ನೇ ತೋರಿಸಿದ್ದಾರೆ. ವಿದೇಶೀಯರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಒಂದೆರಡು ಪ್ರಶಸ್ತಿಗಳು ಬಂದಾಗ ಇಲ್ಲಿನ ಕೆಲ ನಟರು ಕೊಂಬು ಬಂದವರ ಥರ ಏಕೆ ಆಡುತ್ತಾರೆ ? ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಈ ಚಿತ್ರ ಮಾಡಿದ್ದರೆ ಇಲ್ಲಿ ಹಾಗೂ ವಿದೇಶಗಳಲ್ಲಿ ಇಷ್ಟು ಸುದ್ದಿಯಾಗುತಿತ್ತೆ ? ಇಲ್ಲಿನ ೧-೨ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದೇ ವಾರಕ್ಕೆ ನಾಪತ್ತೆಯಾಗುತಿತ್ತು.

ವೆಬ್ ದುನಿಯಾದಲ್ಲಿ ಬಂದ ಬರಹ

ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ಬರಹ

ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ

ಇದು ಯಾವುದಾದರೂ ಭಾರತೀಯ ಭಾಷೆಯಲ್ಲಿ ಮಾಡಿದ್ದರೆ ಅಥವಾ ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಇಂಗ್ಲಿಷ್ ನಲ್ಲಿ ಮಾಡಿದ್ದರೆ Oscar ಬರುತ್ತಿತ್ತೇ ? ನಿಮ್ಮ ಅನಿಸಿಕೆ ಹೇಳಿ.

26 January 2009

ತಿಳಿಮುಗಿಲ ತೊಟ್ಟಿಲಲಿ...

ನಿನ್ನೆ(೨೫ನೇ ಜನವರಿ ೨೦೦೯) ಸ್ನೇಹಿತರ ಜೊತೆ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ಹಾಗೂ ಯೋಗಾನರಸಿಂಹರನ್ನು ನೋಡಲು ಹೋಗಿದ್ದೆ. ಅಲ್ಲಿ ಬೆಟ್ಟದ ಮೇಲೆ ಯೋಗಾನರಸಿಂಹ ದೇವಸ್ಥಾನವಿದೆ. ಅಲ್ಲಿ ದೇವಸ್ಥಾನದ ಒಳಗೆ ಒಂದು ಸೀಡಿ/ಕ್ಯಾಸೆಟ್ ಅಂಗಡಿ ಇದೆ. ದೇವರ ದರ್ಶನ ಆದ ಮೇಲೆ ಹೊರಗೆ ಬರುವಾಗ ೧-೨ ಕನ್ನಡ ಸುಗಮ ಸಂಗೀತದ ಸಿಡಿ ಕೊಳ್ಳುವ ಯೋಚನೆಯಾಯಿತು. ಅಲ್ಲಿ ಇದ್ದುದರಲ್ಲಿ ಆರಿಸಿ ಮೈಸೂರು ಅನಂತಸ್ವಾಮಿಯವರ "ಎದೆ ತುಂಬಿ ಹಾಡುವೆನು" ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರ "ಆನಂದಮಯ" ಸೀಡಿಗಳನ್ನು ಕೊಂಡೆ. ಸಂಜೆ ಮನೆಗೆ ವಾಪಸ್ಸಾದ ಮೇಲೆ ಸುಸ್ತಾಗಿದ್ದರೂ ಕೇಳುವ ಮನಸಾಯಿತು. ಮೊದಲು ಅನಂತಸ್ವಾಮಿಯವರ ಹಾಡುಗಳನ್ನು ಕೇಳಲು ಶುರು ಮಾಡಿದೆ.ಮೊದಲ ೭ ಹಾಡುಗಳು ಮುಗಿದ ಮೇಲೆ ಸುನೀತಾ ಅನಂತಸ್ವಾಮಿ ಹಾಡಲು ಶುರು ಮಾಡಿದರು. "ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ..." ಆಹಾ ಎಂಥಾ ಹಾಡು !!! ಡಾ|| ಎಸ್. ವಿ. ಪರಮೇಶ್ವರ ಭಟ್ಟರ ಅತ್ಯದ್ಭುತ ಕವನ, ಮೈಸೂರು ಅನಂತಸ್ವಾಮಿಯವರ ಮನ ಮುಟ್ಟುವ ಸಂಗೀತ ಹಾಗೂ ಸುನೀತಾರವರ ಮಧುರ ಕಂಠ !!! ನಾನು ಮರುಳಾದೆ. ಎಲ್ಲಾ ಹಾಡುಗಳು ಚೆನ್ನಾಗಿವೆ. ಕೆಲವನ್ನು ನಾನು ಮುಂಚೆ ಕೇಳಿದ್ದೆ. ಆದರೆ ಈ ಹಾಡು ತುಂಬಾ ಇಷ್ಟವಾಯ್ತು, ಒಂದೇ ಸಲ ಕೇಳಿದಾಗ. ಅಯ್ಯೋ ಈ ಹಾಡನ್ನು ಮುಂಚೆ ನಾನು ಯಾಕೆ ಕೇಳಿರಲಿಲ್ಲ ಅನ್ನಿಸಿತು. ನಾವು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೆಲವು ಪ್ರಸಿದ್ಧ ಕವಿಗಳ ಕವನಗಳನ್ನು ಕಲಿತಿದ್ವಿ. ಆದರೆ ಈ ಹಾಡು ಯಾಕೆ ನಮ್ಮ ಪಠ್ಯದಲ್ಲಿ ಇರಲಿಲ್ಲ ಅನ್ನಿಸಿತು. ಮತ್ತೆ ಮತ್ತೆ ಕೇಳಿದೆ. ಕವನ ಬರೆದುಕೊಂಡೆ. ಜೊತೆಗೆ ಹಾಡಿದೆ. ಎಷ್ಟೊಂದು ಅರ್ಥಗರ್ಭಿತವಾಗಿದೆ !! ತೂಗುತಿತ್ತು-ಸಾಗುತಿತ್ತು-ತೇಲುತಿತ್ತು-ಹೇಳುತಿತ್ತು ಎಂಬ ಪ್ರಾಸಗಳು ಎಷ್ಟು ಚೆನ್ನಾಗಿವೆ !! ಎಷ್ಟೊಂದು ಮಧುರವಾಗಿದೆ !!

ಈ ಹಾಡನ್ನು ಕೆಳಗಡೆ ಕೊಟ್ಟಿದ್ದೇನೆ. ಓದಿ, ಸೀಡಿ ಸಿಕ್ಕರೆ ಕೇಳಿ.


ಸಾಹಿತಿ : ಡಾ|| ಎಸ್. ವಿ. ಪರಮೇಶ್ವರ ಭಟ್
ಸಂಗೀತ : ಮೈಸೂರು ಅನಂತಸ್ವಾಮಿ
ಗಾಯಕಿ : ಸುನೀತಾ ಅನಂತಸ್ವಾಮಿ
ಒತ್ತಟ್ಟೆ : "ಎದೆ ತುಂಬಿ ಹಾಡಿದೆನು" - ಸಂಗೀತ ಲೈವ್ ಕ್ಯಾಸೆಟ್/ಆನಂದ್ ಆಡಿಯೋ - ಭಾಗ ೩೧

Song : "tiLi mugila toTTilali malagidda chaMdirana"
Lyrics : Dr. S. V. Parameshwara Bhat
Music : Mysore Ananthaswamy
Singer : Sunitha Ananthaswamy


ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು

ಗರಿ ಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗಸ್ಹೂಡಿ ಸಾಗುತಿತ್ತು

ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ
ಜೇನುಗನಸಿನಾ ಹಾಡು ತೇಲುತಿತ್ತು
ತುಂಬು ನೀರಿನ ಹೊಳೆಯಳಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹೇಳುತಿತ್ತು

ಬರುವ ಮುಂದಿನ ದಿನದ ನವನವೋದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತಿತ್ತು
ಶಾಂತ ರೀತಿಯೊಳಿರುಳು ಮೆಲ್ಲ ಮೆಲ್ಲನೆ ಉರುಳಿ
ಬಾಳಿನಾ ಶುಭೋದಯ ಸಾರುತಿತ್ತು

ಇನ್ನೂ ಯಾವ ಹಾಡು ಇಷ್ಟವಾಗುತ್ತೆ ನೋಡೋಣ.

22 January 2009

ಅಂತರ್ಜಾಲದಲ್ಲಿ ತಿರುಗಾಡುವ ಕನ್ನಡಿಗರಿಗಾಗಿ...

ಇಲ್ಲೊಂದಿಷ್ಟು ಕೊಂಡಿಗಳು..... ಕನ್ನಡಿಗರಿಗಾಗಿ ...

ಕರ್ನಾಟಕ : ಒಂದು ಕಿರುಪರಿಚಯ

ಬರಹ ಕನ್ನಡ ಅಕ್ಷರಗಳ ತಂತ್ರಾಂಶ

ವಿಕಿಪಿಡಿಯ ಕನ್ನಡ ಸಹಾಯ

ಕನ್ನಡ ವಿಕಿಪೀಡಿಯ

ಕನ್ನಡದಲ್ಲಿ ಬರೆಯಲು : ಕ್ವಿಲ್ ಪ್ಯಾಡ್

ಗುರೂಜಿ ಕನ್ನಡ ಹುಡುಕಾಟ

ಗೂಗಲ್ ಕನ್ನಡ ಹುಡುಕಾಟ


ವಿಸ್ಮಯನಗರಿ


ಸಂಪದ - ಹೊಸ ಚಿಗುರು ಹಳೆ ಬೇರು

ಹರಿದಾಸ ಸಂಪದ

ಶ್ರೀ ಉತ್ತರಾದಿ ಮಠದ ಪಂಚಾಂಗ

ಕನ್ನಡ ಗೀತೆಗಳ ಸಾಹಿತ್ಯ

ಕನ್ನಡ ಅಂಗಡಿ

ಕೆಂಡ ಸಂಪಿಗೆ - ಕನ್ನಡದ ಬೆಡಗು ಪರಿಮಳ


ವಿಚಾರ ಮಂಟಪ

ಕನ್ನಡ ಕಸ್ತೂರಿ ಅರ್ಥಕೋಶ

ಸುಮ್ನೆ ಬ್ಲಾಗ್

ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು

ಪೂರ್ತಿ ಕನ್ನಡ


ವಾರ್ತೆಗಳು :
ಕನ್ನಡ ಪ್ರಭ
ವಿಜಯ ಕರ್ನಾಟಕ
ವಿಕ್ರಾಂತ ಕರ್ನಾಟಕ
ನಮ್ಮ ಕರ್ನಾಟಕ
ಸಂಯುಕ್ತ ಕರ್ನಾಟಕ
ಉದಯವಾಣಿ
ಸಂಜೆ ವಾಣಿ
ಪ್ರಜಾವಾಣಿ
ಪ್ರಜಾವಾಣಿ ಈ-ಪೇಪರ್
ದಟ್ಸ್ ಕನ್ನಡ
ಯಾಹೂ ಕನ್ನಡ
ವೆಬ್ ದುನಿಯಾ
ಕನ್ನಡ ರತ್ನ

ಕನ್ನಡ ಹಾಡುಗಳು :

ಕನ್ನಡ ಆಡಿಯೋ
ಕನ್ನಡ ಆಡಿಯೋ.ನೆಟ್
ರಾಗ
ಉದ್ಭವ
ಮ್ಯೂಸಿಕ್ ಇಂಡಿಯಾ ಕನ್ನಡ