03 August 2014

ಶಿಶು ಗೀತೆ - ೬


ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು
ಎತ್ತಿಕೊಳದೆ ಹೋದರದಕೆ ಕೋಪ ಬರುವುದು

ಕೋಪಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು

ಪಾಪ ಅತ್ತರಮ್ಮ ತಾನು ಅತ್ತು ಬಿಡುವಳು
ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು

ಪಾಪ ಪಟ್ಟು ಹಿಡಿದ ಹಠವು ಸಾರ್ಥಕವಾಯಿತು
ಕಿರುಚಿ ಪರಚಿ ಅತ್ತದ್ದೆಲ್ಲ ಅರ್ಥವಾಯಿತು

No comments:

Post a Comment