05 March 2009

ಪ್ರತಿಭಾವಂತ ಗಾಯಕ ವಿಜಯ್ ಪ್ರಕಾಶ್

ಇರುಳ ವಿರುದ್ಧ ಬೆಳಕಿನ ಯುದ್ಧ
ಕೊನೆಯಿಲ್ಲದ ಕಾದಾಟ ....

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ ....

ಈ-ಟಿವಿ ಕನ್ನಡದಲ್ಲಿ ಪ್ರಸಾರವಾಗುವ ಟಿ. ಎನ್. ಸೀತಾರಾಮ್ ನಿರ್ದೇಶನದ ಮುಕ್ತ ಮುಕ್ತ ಧಾರಾವಾಹಿಯ ಈ ಶೀರ್ಷಿಕೆ ಗೀತೆಯನ್ನು ಮೊದಲನೇ ಸಲ ಕೇಳಿದಾಗಲೇ ತುಂಬಾ ಇಷ್ಟವಾಯಿತು. ತಕ್ಷಣ ನನ್ನ ಮನಸಿಗೆ ಬಂದ ಪ್ರಶ್ನೆ "ಯಾರದೀ ಮಧುರ ಧ್ವನಿ ?" ಎಂದು. ಧಾರಾವಾಹಿಯ ಪಾತ್ರಧಾರಿಗಳು ಹಾಗೂ ತಂಡದ ಸದಸ್ಯರ ಹೆಸರುಗಳು ಟಿವಿ ಪರದೆ ಮೇಲೆ ಬರುತ್ತಿರುವಾಗ ಮಧ್ಯದಲ್ಲಿ, ಹಿನ್ನೆಲೆ ಗಾಯನ "ವಿಜಯ್ ಪ್ರಕಾಶ್" ಎಂಬ ಹೆಸರು ಬಂತು. ಆದರೆ ಇವರು ಯಾರು ಎಂದು ಗೊತ್ತಿರಲಿಲ್ಲ/ನೆನಪಿಗೆ ಬರಲಿಲ್ಲ.

ಮೊನ್ನೆ News 9ನಲ್ಲಿ ಇವರ ಸಂದರ್ಶನ ಬಂದ ಮೇಲೆ ಸ್ವಲ್ಪ ತಿಳಿದುಕೊಂಡೆ. ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಜಯಿಸಿದ "Slumdog Millionaire" ಆಂಗ್ಲ ಚಿತ್ರದ "ಜೈ ಹೋ" ಹಾಡಿನಲ್ಲಿ ಇವರ ಧ್ವನಿಯೂ ಸೇರಿದೆ. ಆದರೆ ಬೇರೆ ಭರಾಟೆಗಳ ಮಧ್ಯೆ ಇವರ ಹೆಸರು ಬೆಳಕಿಗೆ ಬರಲಿಲ್ಲ. ಹಾಗೇ ಎ. ಆರ್. ರೆಹೆಮಾನ್ ಸಂಗೀತದ, ಸುಭಾಷ್ ಘಾಯ್ ನಿರ್ದೇಶನದ "ಯುವರಾಜ್" ಚಿತ್ರದಲ್ಲಿ "ಮನ್ ಮೋಹಿನಿ ಮೋರೆ" ಎಂಬ ಶಾಸ್ತ್ರೀಯ ಸಂಗೀತ ಮಿಳಿತಗೊಂಡಿರುವ ಹಾಡನ್ನು ಅತ್ಯದ್ಭುತವಾಗಿ ಹಾಡಿದ್ದಾರೆ.

ಇವರ ಹುಟ್ಟೂರು ಮೈಸೂರು. ತಾಯಿ ಲೋಪಾಮುದ್ರಾ ಪ್ರಕಾಶ್. ತಂದೆ ಎಲ್. ರಾಮಶೇಷ. ೧೯೯೬ರಲ್ಲಿ ಮುಂಬೈಗೆ ಹೋಗಿ ಸುರೇಶ್ ವಾಡ್ಕರ್ ಅವರ ಶಿಷ್ಯರಾದರು. ನಂತರ ಝೀ ಟಿವಿಯ ಸಾರೆಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೈನಲ್ ಪ್ರವೇಶಿಸಿದರು. ಇವರ ಜತೆ ಶ್ರೇಯಾ ಘೋಶಾಲ್ ಹಾಗೂ ಕನ್ನಡದ ಅರ್ಚನಾ ಉಡುಪ ಕೂಡಾ ಇದ್ದರು. ಈ ವಿಷಯ ತಿಳಿದ ಮೇಲೆ ವಿಜಯ್ ಪ್ರಕಾಶ್ ನೆನಪಿಗೆ ಬಂದರು. ಯಾಕಂದ್ರೆ ಸಾರೆಗಮದ ಆ ಕಂತುಗಳನ್ನು ನಾನು ವೀಕ್ಷಿಸಿದ್ದೆ. ಸಾರೆಗಮದಲ್ಲಿ ಕನಕದಾಸರ "ಬಾರೋ ಕೃಷ್ಣಯ್ಯ" ಹಾಡಿ ಕನ್ನಡದ ಕಂಪನ್ನು ಪಸರಿಸಿದವರು ವಿಜಯ್.

ಇವರು ಹಿಂದಿಯ ಕಾಲ್, ವಕ್ತ್, ಸ್ವದೇಸ್, ಚೀನಿ ಕಮ್, ಲಕ್ಷ್ಯ, ಮಾತೃಭೂಮಿ, ತೇರೆ ನಾಮ್ ಚಿತ್ರಗಳಿಗಲ್ಲದೇ ತಮಿಳು ಚಿತ್ರಗಳಿಗೂ ಹಾಡಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲೂ ತಮ್ಮ ಧ್ವನಿಯ ಜಾದೂ ತೋರಿಸಿದ್ದಾರೆ. ಕನ್ನಡದಲ್ಲಿ ೨೦೦೭ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಅಭಿನಯದ, ಗಾಳಿಪಟ ಚಿತ್ರದಲ್ಲಿ ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ "ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ" ಹಾಡನ್ನು ವಿಜಯ್ ಅವರೇ ಹಾಡಿದ್ದು.

ಇಷ್ಟೊಂದು ಪ್ರತಿಭಾವಂತ ಗಾಯಕನಿಗೆ ಇನ್ನಷ್ಟು ಅವಕಾಶಗಳು ಸಿಗಲಿ, ಕನ್ನಡದಲ್ಲಿ ಇನ್ನಷ್ಟು ಹಾಡಲಿ, ಸಂಗೀತ ಕ್ಷೇತ್ರದಲ್ಲಿ ವಿಜಯಿಯಾಗಿ, ಪ್ರಕಾಶಿಸಲಿ.

1 comment:

  1. Vijay Prakash bagge thiLidiralilla. Intha prathibhavantha gaayakanannu Kannada chitraranga gurutisadiddaddu viparyaasa

    ReplyDelete