28 February 2009

ಭಾರತದ ಐಟಿಯಲ್ಲಿ R&D ಯಾಕಿಲ್ಲ ?

ಪ್ರತಾಪ್ ಸಿಂಹ ಅವರ ಇವತ್ತಿನ(28-02-2009) ಲೇಖನ ಓದಿದೆ. ಕಳೆದ ವಾರ ಐಟಿ ಉದ್ಯೋಗಿಗಳನ್ನು ಚುಚ್ಚಿ ಮಾತಾಡಿದ್ರು. "ಕುರುಡು ಕಾಂಚಾಣ ಕುಣಿತಿತ್ತು, ಐಟಿಯವರಿಗೆ ದುಡ್ಡಿನ ಅಹಂಕಾರ ಇತ್ತು, ಮೆರಿತಾ ಇದ್ರು, ಯಾರೂ ಹಿಡಿಯೋರೇ ಇರ್ಲಿಲ್ಲ, ಇವತ್ತು ಯಾರೂ ಇವರ ಬಗ್ಗೆ ಕನಿಕರ ತೋರಿಸಲ್ಲ, ಸ್ವಾಮಿನಿಷ್ಠೆ ಇಲ್ಲ, ವರ್ಕ್ ಕಲ್ಚರ್ ಇಲ್ಲ, ಜನರು ಈಗ REJOICE ಮಾಡ್ತಿದ್ದಾರೆ" ಅಂತ. ಆದರೆ ಇವತ್ತು ಐಟಿ ದೊರೆಗಳ ಬಗ್ಗೆ ಬರೆದಿದ್ದಾರೆ. ಚರ್ಚೆಯಾಗಬೇಕಾದ ವಿಷಯವನ್ನೇ ಎತ್ತಿದ್ದಾರೆ. ಕಳೆದ ಸಲಕ್ಕಿಂತ ಸ್ವಲ್ಪ ಪ್ರಬುದ್ಧವಾಗಿ ಬರೆದಿದ್ದಾರೆ. ಯೋಚನೆ ಮಾಡುವ, ಪ್ರೇರಣೆ ನೀಡುವ ಮಾತಾಡಿದ್ದಾರೆ.

"ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಒಬ್ಬನೂ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ ? ನಮ್ಮ ಸಾಫ್ಟ್ ವೇರ್ ಕ್ಷೇತ್ರ Servicingನಿಂದ Reaserch ಹಾಗೂ Product Developmentಗೆ ಯಾಕೆ ಗ್ರ್ಯಾಜುಯೇಟ್ ಆಗಿಲ್ಲ ?".
ಹೌದು. ಈ ವಿಚಾರ ನನ್ನ ಮನಸ್ಸಿಗೂ ಬಂದಿತ್ತು. 6-7 ವರ್ಷಗಳ ಹಿಂದೆ. ಇಷ್ಟೆಲ್ಲಾ ಐಟಿ ಕಂಪೆನಿಗಳು ಬೆಂಗಳೂರಲ್ಲಿ ಇವೆ. ಬರೇ IT Service ಮಾಡ್ತವೆ. Windows, MAC, Google, Yahoo, Adobe ನಂತೆ ತಮ್ಮದೇ ಆದ ಯಾವ Product ಇದೆ ? ಇವರು ಯಾಕೆ ಅದಕ್ಕೆ ಒತ್ತು ಕೊಡಲ್ಲ ? ಅಂತ. ಈಗ ಗೊತ್ತಾಗ್ತಾ ಇದೆ ಕೆಲವೊಂದು ಕಾರಣಗಳಿಂದಾಗಿ ಅದು ಕಷ್ಟ ಅಂತ. ಆದರೆ ಅಸಾಧ್ಯ ಅಲ್ಲ.

ಐಟಿ ಬಂದು 15 ವರ್ಷ ಆಯ್ತು. ಇಷ್ಟು ದೊಡ್ಡದಾಗಿ ಬೆಳೆದ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಸತ್ಯಂ ಕಂಪನಿಗಳು ಇನ್ನೂ ಯಾಕೆ Product Development ಶುರು ಮಾಡಿಲ್ಲ ? ನನ್ನ ಅನಿಸಿಕೆ ಹೀಗಿದೆ... ಅಮೆರಿಕಾದ A ಕಂಪನಿ, ಭಾರತದ B, C & D ಕಂಪನಿಗಳಿಂದ ಬೇರೆ ಬೇರೆ ಸಾಫ್ಟ್ ವೇರ್ ಗಳನ್ನು ಬರೆಸುತ್ತದೆ. A ಕಂಪನಿ ಅವೆಲ್ಲವನ್ನೂ ಒಟ್ಟು ಮಾಡಿ X ಅನ್ನುವ ಒಂದು final product ತಯಾರು ಮಾಡುತ್ತದೆ. ಆ ಕೆಲಸವೂ ಭಾರತದಲ್ಲೇ ಆಗಬಹುದು. ಆಮೇಲೆ ಉತ್ಪನ್ನವನ್ನು ಭಾರತದಲ್ಲೇ ಮಾರಬಹುದು. ಈಗ ಭಾರತದ B ಕಂಪನಿಗೆ X ಅನ್ನುವ final productನ್ನು ತಾನೇ ಯಾಕೆ ತಯಾರು ಮಾಡಿ ದುಡ್ಡು ಮಾಡಬಾರದು ಅಂತ ಯೋಚನೆ ಬರುತ್ತೆ. ಅದಕ್ಕೆ ಬೇಕಾದ ಪ್ರತಿಭಾವಂತ ಇಂಜಿನೀಯರ್ ಗಳು ಇದ್ದಾರೆ. ಆದರೆ ಆ ಕೆಲಸಕ್ಕೆ ಕೈ ಹಾಕಿದ ಕೂಡಲೆ ಅಮೆರಿಕಾದ A ಕಂಪನಿ, ಭಾರತದ B ಕಂಪನಿಗೆ ಕೆಲಸ/ದುಡ್ಡು ಕೊಡೋದು ನಿಲ್ಲಿಸುತ್ತೆ. ಯಾಕಂದ್ರೆ ಈಗ Bಯು Aಗೆ ಪ್ರತಿಸ್ಪರ್ಧಿ. ಆವಾಗ B ಕಂಪನಿಯ 50,000 ಮಂದಿ ಕೆಲಸ ಕಳೆದುಕೊಳ್ತಾರೆ. ಸಂಬಳ ಕೊಡಲು Bಕಂಪನಿ ಬಳಿ ದುಡ್ಡು ಇರಲ್ಲ. X ಅನ್ನುವ ಒಂದು final product ತಯಾರು ಮಾಡಲು ವರ್ಷಗಳೇ ಬೇಕು. ಇವತ್ತು ಹಣ ಹಾಕಿ, ಕೆಲಸ ಶುರು ಮಾಡಿದ್ರೆ, ನಾಳೆನೇ ದುಡ್ಡು ಬರೋಕೆ ಶುರು ಆಗಲ್ಲ. ಅದಕ್ಕೆ ದುಡ್ಡು ಎಲ್ಲಿಂದ ತರೋದು ? ಭಾರತ ಅಮೆರಿಕಾದಂತೆ ಶ್ರೀಮಂತ ದೇಶವಲ್ಲ. ಹೋಗ್ಲಿ ಬೇರೆ ಕೆಲಸಗಳ ಬಿಡುವಿನ ವೇಳೆಯಲ್ಲಿ ಇದನ್ನಾ ಮಾಡೋಣ ಅಂದ್ರೆ, ಕೆಲಸ ಮುಗಿಸೋಕೆ ಇನ್ನೂ ಹೆಚ್ಚಿನ ವರ್ಷಗಳು ಬೇಕು. ಬಿಡುಗಡೆಯಾಗುವ ಹೊತ್ತಿಗೆ ಅದು old model ಆಗಿ ಬಿಡುತ್ತೆ. ಕೊಳ್ಳೋರೇ ಇಲ್ಲ.

ವಿದ್ಯಾಕ್ಷೇತ್ರದಲ್ಲಿ ಸೇವಾ(Service) ಮನೋಭಾವ ಇರಬೇಕು. ಆದರೆ ಭಾರತದ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳು ಸೇವೆ ಬಿಟ್ಟು ವ್ಯಾಪಾರ ಮಾಡುತ್ತವೆ. ಕೆಲವು ಉಪನ್ಯಾಸಕರು ದುಡ್ಡಿನ ಆಸೆಗೆ ಐಟಿ ಕಡೆಗೆ ಹೋಗ್ತಾರೆ. ಬುದ್ಧಿವಂತ, ಪ್ರತಿಭಾನ್ವಿತ ಇಂಜಿನಿಯರ್ ಗಳು ಉಪನ್ಯಾಸಕರಾಗಿ ಇನ್ನಷ್ಟು ಚಾಣಾಕ್ಷ ಇಂಜಿನಿಯರ್ ಗಳನ್ನು ರೂಪುಗೊಳಿಸಬೇಕು. ಉಪನ್ಯಾಸಕ ವೃತ್ತಿಯಲ್ಲಿ ಆಸಕ್ತಿ ಇರೋರಿಗೆ ಕಾಲೇಜುಗಳು AICTE ನಿಗದಿ ಮಾಡಿದ ಸಂಬಳನೂ ಕೊಡದೆ, ಮಾಡಿದ ಒಳ್ಳೆಯ ಕೆಲಸಕ್ಕೆ ಗೌರವನೂ ಕೊಡದೆ ಕೆಟ್ಟದಾಗಿ ನಡೆಸಿಕೊಳ್ತವೆ. ಅದಕ್ಕೆ ಅವರೂ ಕೂಡ ಐಟಿಕಡೆ ಮುಖ ಮಾಡ್ತಾರೆ. ಕೆಲವು ಒಳ್ಳೆಯ ಪ್ರಾಧ್ಯಾಪಕರಿದ್ದಾರೆ. ಆದರೆ ಎಷ್ಟು ಜನ ? ಅವರಿಂದ ಏನು ಬದಲಾವಣೆ ಮಾಡಲು ಸಾಧ್ಯ ? ಇದರಿಂದ ವಿದ್ಯಾರ್ಥಿಗಳು ಪುಸ್ತಕದ ಬದನೇಕಾಯಿ ಮಾತ್ರ ಕಲಿತಾರೆ. ಪರೀಕ್ಷೆಗೆ ಎಷ್ಟು ಬೇಕೋ ಅಷ್ಟೇ. Campus Selectionಗೆ ಎಷ್ಟು ಬೇಕೋ ಅಷ್ಟೇ. ಹೊಸದರ ಬಗ್ಗೆ ಚಿಂತೆ ಮಾಡೋಕೆ ಹೋಗಲ್ಲ. "ಹೀಗೆ" ಮಾಡಬೇಕು ಅಂದ್ರೆ, "ಹೀಗೆ"ನೇ ಮಾಡ್ತಾರೆ. "ಹಾಗೆ" ಮಾಡಿದ್ರೆ ಏನಾಗುತ್ತೆ ? ಬೇರೆ ಥರ ಮಾಡೋಕೆ ಆಗೊಲ್ವೆ ? ಅಂತ ಯೋಚನೇನೆ ಮಾಡೋಲ್ಲ. ನರ್ಸರಿಯಿಂದ ಇಂಜಿನೀಯರಿಂಗ್ ವರೆಗೂ ಟ್ಯೂಷನ್. ಚಮಚದಿಂದ ತಿಂದೇ ಅಭ್ಯಾಸ. ತಾವೇ ಸ್ವಂತ ಕೈಯಿಂದ ತಿನ್ನೋಕೆ ಕಲಿಯೋದೇ ಇಲ್ಲ. 20 ವರ್ಷ ಆದಮೇಲೆ, ಇಂಜಿನೀಯರಿಂಗ್ ನಲ್ಲಿ ಸ್ವಂಯ ಓದಿ ಕಲಿಯುವ ಪ್ರೌಢಿಮೆ/ಜಾಣ್ಮೆ ಇಲ್ವೇ ? ಇನ್ನು ಇಂಥಾ ಕಾಲೇಜ್ ಗಳಿಂದ ಹೊರಬಂದ ವಿದ್ಯಾರ್ಥಿಗಳು ಹೊಸ ಕಂಪೆನಿ ಶುರು ಮಾಡಿ, ಹೊಸ Product ಮಾಡಿ ಮಾರೋದು ಹೇಗೆ ?

ಅಮೆರಿಕಾ ಹಾಗೂ ಯೂರೋಪ್ ನ ವಿಶ್ವವಿದ್ಯಾನಿಲಯಗಳು ತುಂಬಾ ಶ್ರೀಮಂತವಾಗಿವೆ. ಅಲ್ಲಿ ಓದುತ್ತಿರುವ ಅಲ್ಲಿನ ಅಥವಾ ಭಾರತದ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಹಚ್ಚುತ್ತಾರೆ. ಒಳ್ಳೆಯ ವಿದ್ಯಾರ್ಥಿವೇತನ ಸಿಗೋದ್ರಿಂದ ಅವರಿಗೆ ಸಂಶೋಧನೆ ಬಿಟ್ಟು ಬೇರೆ ತಲೆಬಿಸಿ ಇರಲ್ಲ. ಅಲ್ಲೇ ಹೊಸ Productಗಳು ಮೊಳಕೆಯೊಡೆಯುವುದು. ಅಲ್ಲಿಂದ ಹೊರಬಂದ ನಂತರ ಅದೇ ಜನ ಸೇರಿ ಹೊಸ ಕಂಪನಿ ಮಾಡಿ ಬೆಳೆಯೋದು. Finlandನ Linus Benedict Torvalds ಅನ್ನೋನು Linux ಬರೆದಿದ್ದು University if Helsinki ಯಲ್ಲಿ. ಹೀಗೆ ಇನ್ನೂ ಅನೇಕ Productಗಳಿಗೆ ಅಡಿಪಾಯ ಹಾಕಿದ್ದು ವಿಶ್ವವಿದ್ಯಾನಿಲಯಗಳ ಪ್ರಯೋಗ ಶಾಲೆಗಳಲ್ಲೇ. ಅವೇ ಇಂದು ಹೆಮ್ಮರವಾಗಿ ಬೆಳೆದಿವೆ. ನೀವೇ ಹೇಳಿ ಭಾರತದಲ್ಲಿ ಅಂತಹ ಎಷ್ಟು ವಿಶ್ವವಿದ್ಯಾನಿಲಯಗಳು ಇವೆ ? (IIT/IIScಗಳಲ್ಲಿ ಸಂಶೋಧನೆ ಆಗುತ್ತೆ ನಿಜ). ಭಾರತದ ಎಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗೆ ದುಡ್ಡು ಇದೆ ? ಹೊಸ Instruments ಕೊಳ್ಳಲು ದುಡ್ಡು ಇದೆ ? ಹಳೇ ಕಾಲದ Instrumentಗಳಿಂದ ಏನು ಸಂಶೋಧನೆ ಮಾಡಲು ಸಾಧ್ಯ ? (ಭಯೋತ್ಪಾದಕರ ಬಳಿ AK47 ಇರೋವಾಗ, ನಮ್ಮ ಪೋಲೀಸರ ಬಳಿ ಲಾಠಿ, ಸಣ್ಣ ರಿವಾಲ್ವರ್ ಇರೋಹಾಗೆ). ಇನ್ನು PhD ಬಗ್ಗೆ ಹೇಳೋದೇ ಬೇಡ. PhDಗೆ ಆಯ್ಕೆ ಮಾಡುವ ವಿಷಯಗಳು, ಮಾರ್ಗದರ್ಶಕರನ್ನು ಆಯ್ಕೆ ಮಾಡೋದು, ಸಂಶೋಧನೆ ಮಾಡೋದು, ಪ್ರಬಂಧ ಬರೆಯೋದು, ಅದರ ಗುಣಮಟ್ಟದ ಬಗ್ಗೆ ವಿಜಯ ಕರ್ನಾಟಕದಲ್ಲಿ ಸಾಕಷ್ಟು ಜನ ಹೇಳಿಕೊಂಡಿದ್ದಾರೆ. ಇನ್ನು ಹೇಳೋಕೆ ಏನೂ ಉಳಿದಿಲ್ಲ.

ಇನ್ನು ಕೆಲ Brilliant Engineerಗಳಿಗೆ ಒಳ್ಳೆಯ ಯೋಚನೆ & ಯೋಜನೆ ಇದೆ, ಸ್ವಂತ ಕಂಪನಿ ತೆರೆದು R&D ಮಾಡಿ ತಮ್ಮದೇ ಆದ Product ಬಿಡುಗಡೆ ಮಾಡುವ ಯೋಚನೆ ಬಂದ್ರೆ ಮನೆಯವರು ಬೇಡ ಅನ್ನುತ್ತಾರೆ. "ಸುಮ್ನೆ ಕೆಲಸಕ್ಕೆ ಸೇರಿ ಆರಾಮವಾಗಿರು" ಅಂತಾರೆ. ಸ್ನೇಹಿತರು "ನಿಂಗೆ ತಲೆ ಕೆಟ್ಟಿದೆ" ಅಂತಾರೆ. ಮೊದಲೇ ಭಾರತ ಬಡ/ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. (ಇದ್ದಿದ್ದ ಎಲ್ಲವನ್ನೂ ಬ್ರಿಟಿಷರು ಅಂದೇ ದೋಚಿಕೊಂಡು ಹೋದ್ರು.) ಹೀಗಿರೋವಾಗ ಹಣ ಹೂಡಲು ಯಾವ Venture Capitalist ಮುಂದೆ ಬರ್ತಾರೆ ? ಕಷ್ಟಪಟ್ಟು ದುಡಿದ White Money ಹೂಡಿ risk ತಗೊಳ್ಳಲು ಯಾರೂ ಮುಂದೆ ಬರಲ್ಲ. ಇನ್ನು ಕೆಲವರದ್ದು Black Money, Swiss Bankನಲ್ಲಿದೆ. ಅದೂ ಬರಲ್ಲ. ಇನ್ನು ಹೇಗೆ R&D ಮಾಡಿ ತಮ್ಮದೇ Product ಮಾಡೋದು ? ಒಂದು ವೇಳೆ ಎಲ್ಲಾ ಸರಿ ಹೋಗಿ Product ಮಾಡಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ರು ಅನ್ನೋಣ. ಆವಾಗ ಅದೇ ಅಮೆರಿಕಾದ ಕಂಪೆನಿಗಳಿಂದ ಸ್ಪರ್ಧೆ. ಈ ಸ್ಪರ್ಧೆ ಯನ್ನು ಸಮರ್ಥವಾಗಿ ಎದುರಿಸಲು ಇನ್ನೂ ದುಡ್ಡು ಬೇಕು. ಈ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಹೊಸ ಕಂಪನಿಯನ್ನು ಮುಚ್ಚುವಂತೆ ಮಾಡುತ್ತೆ. ಇಲ್ಲಾ ಕೊಂಡುಕೊಳ್ಳುತ್ತೆ. ಕೊಂಡ ಮೇಲೆ ಈ ಹೊಸ Product ನ್ನು ಅಲ್ಲಿಗೇ ನಿಲ್ಲಿಸಿ ತಮ್ಮ Product ನ್ನು ಮಾತ್ರ ಮಾರಾಟ ಮಾಡುತ್ತೆ. Hindustan Lever, Proctor & Gamble ಗಳು ಭಾರತದ ಎಷ್ಟು ಸಣ್ಣ ಸಾಬೂನು ಕಂಪನಿಗಳನ್ನು ಮುಚ್ಚಿವೆ ಅಥವಾ ಕೊಂಡಿವೆ ? ಹಾಗೇ Microsoft ಇಷ್ಟು ದೊಡ್ಡದಾಗಿ ಬೆಳೆಯುವಾಗ ಎಷ್ಟು ಸಣ್ಣ ಕಂಪನಿಗಳನ್ನು ಹೊಸಕಿ ಹಾಕಿರಬಹುದು ? ಗೊತ್ತಿಲ್ಲ.

ಹೆಚ್ಚಿನ ಭಾರತೀಯರು ಅಲ್ಪ ತೃಪ್ತರು. ಕೆಲಸ ಇದೆ, ಸಂಬಳ ಬರ್ತಾ ಇದೆ ಸಾಕು ಅನ್ನೋರು. ಮದುವೆ ಹೆಂಡ್ತಿ, ಮಕ್ಕಳು ತಲೆಬಿಸಿ ಆದ ಮೇಲೆ ಯಾರೂ risk ತಗೋಳೋಕೆ ಮುಂದೆ ಬರಲ್ಲ.

ಇಷ್ಟೆಲ್ಲಾ ಇದ್ರೂನೂ ನಮ್ಮ Product ಗಳು ಇಲ್ಲವೇ ಅಂತ ಏನೂ ಅಲ್ಲ. ವಿಪ್ರೋ ಅವರ ಲ್ಯಾಪ್ ಟಾಪ್, ಪ್ರಿಂಟರ್ ಗಳು ಇವೆ. ಆದರೆ ಎಷ್ಟು ಜನ ಕೊಳ್ತಾರೆ ? ಭಾರತದ ಉತ್ಪನ್ನ ಗಳನ್ನು ಕೊಳ್ಳೋಕೆ ಜನ ಹಿಂದೇಟು ಹಾಕ್ತಾರೆ. Hotmail ಭಾರತೀಯರೇ ಮಾಡಿ ಮಾರಿದ್ದು. ಇನ್ನು ಎಷ್ಟು ಸಣ್ಣ ಕಂಪನಿಗಳು ಶುರು ಆಗಿ, ಮುಳುಗಿ ಹೋಗಿರಬಹುದು, ಹಣದ ಅಭಾವದಿಂದ ಆಮೆಗತಿಯಲ್ಲಿ ಸಾಗುತ್ತಿರಬಹುದು, ಗೊತ್ತಿಲ್ಲ.

R&D ಮಾಡಿ, ತಮ್ಮದೇ ಆದ Product ಬಿಡುಗಡೆ ಮಾಡಿ, ಯಶಸ್ಸು ಸಾಧಿಸುವುದು ಭಾರತದ ಮಟ್ಟಿಗೆ ಕಷ್ಟ ಆದ್ರೆ ಅಸಾಧ್ಯವಲ್ಲ. ಆದ್ರೆ ಯಾರು, ಎಷ್ಟು ಜನ/ಕಂಪನಿ ಮುಂದೆ ಬಂದು ಮಾಡ್ತಾರೆ ? ಹೇಗೆ ಮಾಡ್ತಾರೆ ? ಗೊತ್ತಿಲ್ಲ.


( ಇನ್ನೂ ಕೆಲವು ವಿಷಯಗಳು ........
ತಮ್ಮ ದೊಡ್ಡ Product ಇಲ್ಲದೇ ಇದ್ದರೂ ನಾರಾಯಣ ಮೂರ್ತಿಯವರ ಸಾಧನೆ ಏನೂ ಸಣ್ಣದಲ್ಲ. ಇವರು ಹೊಸದಾಗಿ ಕಂಪೆನಿ ಹುಟ್ಟುಹಾಕಿ ಇಷ್ಟು ಎತ್ತರಕ್ಕೆ ಬೆಳೆಸಿದವರು. ಬೇರೆ ಕೆಲವರ ಥರ ಅಪ್ಪನಿಂದ ಬಂದಿದ್ದನ್ನು ಮುಂದುವರಿಸಿ, ಬೆಳೆಸಿದ್ದಲ್ಲ. ಮೂರ್ತಿಯವರನ್ನು ಭಾರತದ ಬಿಲ್ ಗೇಟ್ಸ್ ಅನ್ನೋದಕ್ಕಿಂತ, ಗೇಟ್ಸ್ ಅಮೆರಿಕಾದ ಮೂರ್ತಿ ಅನ್ನಬಹುದಲ್ಲವೇ ?
ISRO, DRDO, CDAC, C-DOTಗಳ ಸಾಧನೆ ಶ್ಲಾಘನೀಯ. ಇಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ಬಗ್ಗೆ ನಂಗೆ ತುಂಬಾ ಗೌರವ ಇದೆ. ಪ್ರತಿಯೊಬ್ಬ ಭಾರತೀಯನೂ ಈ ಕಂಪೆನಿಗಳ ಬಗ್ಗೆ ಹೆಮ್ಮೆ ಪಡಬೇಕು.
Dell ಮಾಡೊದು ಕಂಪ್ಯೂಟರ್ ನ ಬಿಡಿ ಭಾಗಗಳನ್ನು ಜೋಡಿಸಿ ಮಾರುವ ಕೆಲಸ. ಅಲ್ಲಿ ಎಷ್ಟು ಸಂಶೋಧನೆ ನಡೆಯುತ್ತೆ ನಂಗೆ ಗೊತ್ತಿಲ್ಲ.
Appleನ iPod/iPhoneಗಳು ಪ್ರಸಿದ್ಧ. ಆದರೆ ಅದರ Laptop, MAC Operating Systemಗಳು ಅಷ್ಟು ಪ್ರಸಿದ್ಧಿ ಪಡೆದಿಲ್ಲ. ಬೆಂಗಳೂರಲ್ಲಿ ಯಾರ ಕೈಯಲ್ಲೂ ನಾನು Apple Notebook ನೋಡಿಲ್ಲ.
ಆರ್ಥಿಕ ಹಿಂಜರಿತದಿಂದ Services Companyಗಳಿಗೆ ಮಾತ್ರ ಹೊಡೆತ, ತಮ್ಮದೇ Product ಇರುವ ಕಂಪನಿಗಳಿಗೆ ತೊಂದರೆ ಇಲ್ಲ ಅನ್ನೋದು ತಪ್ಪು. ಒಂದು product ಜನಪ್ರಿಯ ಆದ್ರೆ ಕಂಪನಿಯ ಜತೆಗೆ ದೇಶಕ್ಕೂ ಒಳ್ಳೆಯ ಹೆಸರು ಬರುತ್ತೆ. ಆದರೆ ಆರ್ಥಿಕ ಹಿಂಜರಿತದಿಂದ Product ಮಾರಾಟವಾಗದಿದ್ದಾಗ Product Development ನಿಲ್ಲಿಸಬೇಕಾಗುತ್ತದೆ. (ಕಾರ್ ಗಳ ಮಾರಾಟ ಕುಂಠಿತವಾದಾಗ, ಅದರ ಉತ್ಪಾದನೆಯನ್ನು ಕಡಿಮೆ ಮಾಡುವ ಹಾಗೆ.) ಅದರ ಬಿಸಿ ಐಟಿ, ಬ್ಯಾಂಕಿಂಗ್, ವಾಹನೋದ್ಯಮ, ರಿಯಲ್ ಎಸ್ಟೇಟ್ ಎಲ್ಲದಕ್ಕೂ ತಟ್ಟುತ್ತದೆ.
ಗೇಟ್ಸ್, ಜಾಬ್ಸ್, ಡೆಲ್ ಒಂದು ಹಂತದವರೆಗೆ Product Development ಮಾಡಿರಬಹುದು. ನಂತರ ಅವರು ಮಾಡಿದ್ದು Product Management & Marketing.
ಅಮೆರಿಕಾದ ಕಂಪನಿಗಳು ಇಲ್ಲಿಯ ಸಾಫ್ಟ್ ವೇರ್ ಕಂಪನಿಯವರಿಂದ ಕೆಲಸ ಮಾಡಿಸಿ, ಇಲ್ಲೇ ಮಾರಿ, ದುಡ್ಡು ದೋಚುತ್ತಿವೆ. ನಿಜ. ಹಾಗೇನೇ ಬೇರೆ ಬಹುರಾಷ್ಟ್ರೀಯ ಕಂಪನಿಗಳು ಯಾವುದೇ ಪೋಷಕಾಂಶಗಳಿಲ್ಲದ ತಂಪು ಪಾನೀಯ/ಸಾಬೂನು/ಚಿಪ್ಸ್/ನೀರು ಮಾರಿ ದುಡ್ಡು ದೋಚುತ್ತಿವೆ.
R&D ಕೇವಲ ಐಟಿ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಆಗಬೇಕು.)

4 comments:

 1. ಪ್ರಬುದ್ಧವಾದ ಲೇಖನ. Service business model ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರ. ನಮ್ಮಲ್ಲಿ ಉತ್ತಮ ವಿದ್ಯಾರ್ಥಿ ವೇತನವಿಲ್ಲದೆ ಎಷ್ಟು ಜನ ತಮ್ಮನ್ನು R&D ನಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿರುತ್ತಾರೆ.

  ReplyDelete
 2. ಇನ್ನಷ್ಟು ವಿಷಯಗಳು ಬೇಕೇ ?

  ನಾನ್ಯಾಕೆ ಬಿಲ್ ಗೇಟ್ಸ್ ಆಗಿಲ್ಲ .......?
  http://kadalateera.blogspot.com/2009/02/blog-post_28.html


  ಮು೦ದುವರಿದ ಪ್ರತಾಪ್ ಪ್ರಲಾಪ :
  http://www.raveeshkumar.com/2009/03/pratap-simhas-wrong-notions-about-it.html


  ಪ್ರತಾಪ್ ಸಿಂಹ ಹೇಳಿದ ದೂರಸಂಪರ್ಕ (Telecommunications) ಪಾಠ ...
  ಭೂತದ ಬಾಯಲ್ಲಿ ಭಗವದ್ಗೀತೆ :
  http://guruve.blogspot.com/2009/03/telecommunications.html

  ReplyDelete
 3. >>Appleನ iPod/iPhoneಗಳು ಪ್ರಸಿದ್ಧ. ಆದರೆ ಅದರ Laptop, >>MAC Operating Systemಗಳು ಅಷ್ಟು ಪ್ರಸಿದ್ಧಿ ಪಡೆದಿಲ್ಲ. >>ಬೆಂಗಳೂರಲ್ಲಿ ಯಾರ ಕೈಯಲ್ಲೂ ನಾನು Apple Notebook ನೋಡಿಲ್ಲ.

  :-)

  ReplyDelete
 4. ಸಂಗೀತಾ ಅವ್ರೇ, ಇದರಲ್ಲಿ ನಿಮ್ಮ ಟಿಪ್ಪಣಿ ಏನು ?

  ReplyDelete